ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿ

ಬಸವನಬಾಗೇವಾಡಿ: ಜಾಗತಿಕ ಮಟ್ಟದ ಅಭಿವೃದ್ಧಿಯಲ್ಲಿ ಭಾರತ 5ನೇ ಸ್ಥಾನ ಪಡೆದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ದಾಮೋದರಜಿ ಹೇಳಿದರು.

ಪಟ್ಟಣದ ತೆಲಗಿ ರಸ್ತೆಯ ಬಸವನಗರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 5 ವರ್ಷದಲ್ಲಿ ಭಾರತವನ್ನು ಅಭಿವೃದ್ಧಿಗೊಳಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನ, ಗಂಗಾ ನದಿ ಸ್ವಚ್ಛತೆ, ಜನಧನ, ಮುದ್ರಾ ಸೇರಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವುದು ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮತದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ. ಕಲ್ಲೂರ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಬೂತ್‌ಮಟ್ಟದವರೆಗಿನ ಮತದಾರರಿಗೆ ತಿಳಿಸಿ ಅರಿವು ಮೂಡಿಸಬೇಕು ಎಂದರು.

ಬಿಜೆಪಿ ಪ್ರಚಾರ ಕಚೇರಿ ಉದ್ಘಾಟನೆ ನಂತರ ಬಸವನಬಾಗೇವಾಡಿಯ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಮುಖಂಡರು, ಕಾರ್ಯಕರ್ತರು ಮತಯಾಚಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಸಂಚಾಲಕ ಜಗದೀಶ ಕೊಟ್ರಶೆಟ್ಟಿ, ತಾಪಂ ಸದಸ್ಯ ಅಮೃತ ಯಾದವ, ಜಿಪಂ ಸದಸ್ಯ ಸಂತೋಷ ನಾಯಕ, ಮುಖಂಡರಾದ ಶಂಕರಗೌಡ ಪಾಟೀಲ, ಎಸ್.ಎ. ದೇಗಿನಾಳ, ಟಿ.ಟಿ. ಹಗೇದಾಳ ಇತರರು ಇದ್ದರು.

Leave a Reply

Your email address will not be published. Required fields are marked *