ಪಾಕ್‌ಗೆ ತಕ್ಕ ಪಾಠ ಕಲಿಸಿ

ಬಸವನಬಾಗೇವಾಡಿ: ದೇಶದ ಕಣವೆ ರಾಜ್ಯ ಕಾಶ್ಮೀರದ ಪುಲ್ವಾಮಾದ ಅವಂತಿಪುರದಲ್ಲಿ ದಾಳಿ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರ ಹತ್ಯೆಯ ಘಟನೆಗಳಿಗೆ ಉಗ್ರರನ್ನು ಪ್ರಚೋದಿಸುತ್ತಿರುವ ಪಾಕ್‌ಗೆ ತಕ್ಕ ಪಾಠ ಕಲಿಸುವಂತೆ ಆಗ್ರಹಿಸಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅಗಸಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಮೂಲಕ ವಿವಿಧ ಘೋಷಣೆ ಕೂಗುತ್ತ ಬಸವೇಶ್ವರ ವೃತ್ತಕ್ಕೆ ತೆರಳಿ ಅಲ್ಲಿ ಹುತಾತ್ಮ ವೀರಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಹಿರಿಯರಾದ ಕೆ.ಪಿ. ಕುಲಕರ್ಣಿ ಮಾತನಾಡಿ, ದೇಶದ ರಕ್ಷಣೆ ಕರ್ತವ್ಯ ನಿರತ ಯೋಧರ ಮೇಲೆ ದಾಳಿ ನಡೆಸಿ ಯೋಧರನ್ನು ಹತ್ಯೆ ಮಾಡಿದ್ದು ಖಂಡನೀಯ. ರಾಷ್ಟ್ರದ ಹಿತಕ್ಕೆ ಮಾರಕವಾದ ಭಯೋತ್ಪಾದನೆ ಹೇಯ ಕೃತ್ಯ ನಿರಂತರ ಸಾಗಿದ್ದು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರಗಾಮಿಗಳ ಅಡಗುತಾಣಗಳ ಮೇಲೆ ಓಸಾಮಾ ಬಿನ್ ಲಾಡೆನ್ ಹತ್ಯೆಗೈದ ಅಮೆರಿಕಾ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಬೇಕೆಂದು ಆಗ್ರಹಿಸಿದರು.

ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಕೆ. ಮಠ ಮಾತನಾಡಿದರು. ಗುರು ಸಾರಂಗಮಠ, ಪ್ರಭು ಪಟ್ಟಣಶೆಟ್ಟಿ, ಅಶೋಕ ಮುಳವಾಡ, ಆರ್.ಎನ್. ಬೇವನೂರ, ಮಹಾವೀರ ಹೊಸಮನಿ, ಶ್ರೀಕಾಂತ ಕೋರಿ, ಆರ್.ವಿ. ಯಳಮೇಲಿ, ರುದ್ರಗೌಡ ಪಾಟೀಲ, ಶರಣಗೌಡ ಪಾಟೀಲ, ಮಲ್ಲು ಗಂಗೂರ, ಶಂಕರ ಹೂಗಾರ, ಮಲ್ಲು ಬಿರಾದಾರ, ಐ.ಬಿ. ಬಾಗವಾನ ಮತ್ತಿತರಿದ್ದರು