ಎಡಪಂಥಿಯರಿಂದ ನಿಂದನೆ ಸಲ್ಲ

<<ಶಿವಪ್ರಕಾಶ ಸ್ವಾಮೀಜಿ ಹೇಳಿಕೆ ? ಶಿವಪ್ಪ ಮುತ್ಯಾ ಜಾತ್ರೋತ್ಸವ >>

ಬಸವನಬಾಗೇವಾಡಿ: ಎಡಪಂಥಿಯರು ಪ್ರಚಾರಕ್ಕಾಗಿ ಶ್ರೀರಾಮ, ಪವಾಡ ಪುರುಷರು ಹಾಗೂ ಹಿಂದು ಧರ್ಮದ ಕುರಿತು ನಿಂದನೆ ಮಾಡುವುದು ಸರಿಯಲ್ಲ ಎಂದು ಸ್ಥಳೀಯ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿವಪ್ಪ ಮುತ್ಯಾ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಗ್ರಾಣ ಕೊಠಡಿ ಉದ್ಘಾಟನೆ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀರಾಮ ಭರತ ಖಂಡದ ಆದರ್ಶ ಪುರುಷನಾಗಿದ್ದು, ಆತನ ಕುರಿತಾಗಿ ಹಲವಾರು ಕುರುಹುಗಳು ಪತ್ತೆಯಾಗಿವೆ. ಸಮಾಜಕ್ಕೆ ಉನ್ನತ ಸಂದೇಶ ನೀಡಿದವರ ಕುರಿತಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಎಡಪಂಥಿಯರು ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಶಿವಪ್ಪ ಮುತ್ಯಾನವರು ಭಕ್ತರ ಮನದಲ್ಲಿ ನೆಲೆಸಿದ್ದಾರೆ. ಭಕ್ತರ ಸಹಾಯ ಹಾಗೂ ಶಾಸಕರ ಅನುದಾನದಲ್ಲಿ ಉಗ್ರಾಣ ಕೊಠಡಿ ನಿರ್ಮಿಸಿದ್ದು ಶ್ಲಾಘನೀಯವಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಸಮುದಾಯಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸುವ ಜತೆಗೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳು ನಡೆಯಬೇಕು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಎಸ್. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿದರು. ಶ್ರೀಶೈಲ ಕೂಡಗಿ, ಅಣ್ಣು ದುಂಬಾಳಿ, ಸಂಗಪ್ಪ ವಾಡೇದ, ಶ್ರೀಶೈಲ ಮುರಡಿ, ರವಿ ಹಿರೇಮಠ ಇತರರಿದ್ದರು.

ಸದಾಶಿವ ಹೊನವಾಡ ಪ್ರಾರ್ಥಿಸಿದರು. ಬಸವರಾಜ ಕೋಣಿನ ಸ್ವಾಗತಿಸಿದರು. ಆದಿನಾಥ ಉಪಾಧ್ಯ ನಿರೂಪಿಸಿದರು. ಮಹೇಶ ಹಿರೇಕುರುಬರ ವಂದಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಶಿವಪ್ಪ ಮುತ್ಯಾ ಪಲ್ಲಕ್ಕಿ ಉತ್ಸವ ಹಾಗೂ ಗಂಗಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶ್ರದ್ದಾಭಕ್ತಿಯೊಂದಿಗೆ ನಡೆದವು. ಅಗ್ಗಿ ಹಾಯುವ ಕಾರ್ಯಕ್ರಮದಲ್ಲಿ ಪುರವಂತರು ಹಾಗೂ ಅಯ್ಯಪ್ಪ ಸ್ವಾಮಿ ವ್ರತಧಾರಿ ಭಕ್ತರು ಪಲ್ಲಕ್ಕಿ ಹೊತ್ತುಕೊಂಡು ಅಗ್ನಿ ಪೂಜೆ ಸಲ್ಲಿಸಿ ಅಗ್ಗಿ ಹಾಯ್ದರು. ನಂತರ ಭಕ್ತರೂ ಭಕ್ತಿಯೊಂದಿಗೆ ಅಗ್ಗಿ ಹಾಯ್ದು ಭಕ್ತಿ ಸಮರ್ಪಿಸಿದರು.