ಜಿಲ್ಲೆಯಲ್ಲೇ ಬಸವನಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರ

ಬಸವನಬಾಗೇವಾಡಿ: ಭೀಕರ ಬರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇನ್ನುಳಿದವು ಅಭಿವೃದ್ಧಿಯಲ್ಲಿದ್ದು, ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನಗೂಳಿಯಲ್ಲಿ ವ್ಯಾಪಾರಸ್ಥರು ಬೀದಿ ಬದಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಇದೀಗ 1 ಕೋಟಿ ರೂಗಳ ಅನುದಾನದಲ್ಲಿ ಕೃಷಿ ಮಾರುಕಟ್ಟೆ ಮೇಲ್ಛಾವಣಿ ನಿರ್ಮಾಣ ಹಾಗೂ ಪಟ್ಟಣದಲ್ಲಿ ನಿರಂತರ ನೀರು 24್ಡ 7 ಯೋಜನೆ ಅನುಷ್ಠಾನಗೊಂಡಿದ್ದು ಸಂತಸದ ಸಂಗತಿ ಎಂದರು.

ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರುಗೊಳಿಸಿದ್ದು, ಇದೀಗ ಒತ್ತುವರಿಯಾಗಿದ್ದ ಪಿಡಬ್ಲೂಡಿ ಕ್ವಾರಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿದೆ. ಸಾರ್ವಜನಿಕ ಸೌಲಭ್ಯಕ್ಕೆ ಸರ್ಕಾರಿ ಜಾಗ ಅವಶ್ಯಕವಾಗಿದ್ದು, ಜನರು ಒತ್ತುವರಿ ಮಾಡದೇ ಅಭಿವೃದ್ಧಿ ಕಾಮಗಾರಿಗೆ ಸ್ಪಂದಿಸಬೇಕು. ಸುಸಜ್ಜಿತ ಒಳಚರಂಡಿ ಬೇಡಿಕೆಯನ್ನೂ ಶೀಘ್ರ ಇಡೇರಿಸುತ್ತೇನೆ ಎಂದು ಹೇಳಿದರು.

ಬಸವನಬಾಗೇವಾಡಿ ಪಟ್ಟಣದಲ್ಲಿ 8 ಕೋಟಿ ರೂಗಳಲ್ಲಿ ಬೃಹತ್ ಬಸವ ಭವನ, ಪುರಸಭೆ, ಮೆಗಾ ಮಾರುಕಟ್ಟೆ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, 6 ತಿಂಗಳಲ್ಲಿ ನಿರಂತರ ನೀರು ಜನತೆಗೆ ಲಭ್ಯವಾಗಲಿದೆ. ಇದೇ ರೀತಿ ಮನಗೂಳಿ ಪಟ್ಟಣವೂ ಅಭಿವೃದ್ಧಿಯಾಗಬೇಕೆಂಬ ಆಶೆ ಇದೆ. ಮತಕ್ಷೇತ್ರದಲ್ಲಿ ಜನತೆ ನೀರಿಗೆ ಅಲೆದಾಡುವ ಪರಿಸ್ಥಿತಿಯಿಲ್ಲ, ಮುಂಬರುವ ಜೂನ್-ಜುಲೈನಲ್ಲಿ ಮಳೆ ಬರುವರೆಗೆ ಅವಶ್ಯಕ ನೀರನ್ನು ಆಲಮಟ್ಟಿ ಅಣೆಕಟ್ಟೆಯಲ್ಲಿ ಸಂಗ್ರಹಿಸಡಲಾಗಿದೆ ಎಂದರು.

ವಿಜಯಪುರ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಚಿಕಿತ್ಸೆಗೆ ಕೊರತೆಯಾಗಬಾರದೆಂಬ ನಿಟ್ಟಿನಲ್ಲಿ ತಾಯಿ- ಮಗುವಿನ ಆಸ್ಪತ್ರೆ ನಿರ್ಮಾಣವಾಗಿದ್ದು, ಶೀಘ್ರ ಹೃದಯ, ಕ್ಯಾನ್ಸರ್, ಸೂಪರ್‌ಸ್ಪೇಶಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಆಸ್ಪತ್ರೆಯಲ್ಲಿ ಇದೀಗ ವಾತಾವರಣ ಬದಲಾಗಿದೆ. ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ 7 ತಿಂಗಳಲ್ಲಿ 120 ಕೋಟಿ ರೂ. ಅನುದಾನ ತರಲಾಗಿದೆ ಎಂದರು.

ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಮಂಗಳವೇಡೆ ಮಾತನಾಡಿದರು. ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಿ.ಪಿ. ಪಾಟೀಲ, ಉಪಾಧ್ಯಕ್ಷ ಸುರೇಶ ತಳವಾರ, ನಿರ್ದೇಶಕರಾದ ವಿಶ್ವನಾಥಗೌಡ ಪಾಟೀಲ, ಶೇಖರ ಗೊಳಸಂಗಿ ಸೇರಿ ಮತ್ತಿತರರಿದ್ದರು.

ವಿವಿಧ ಕಾಮಗಾರಿ: ಮನಗೂಳಿ ಪಟ್ಟಣದಲ್ಲಿ 14ನೇ ಹಣಕಾಸು ಹಾಗೂ ಎಸ್‌ಎ್ಸಿ ಯೋಜನೆಯಡಿ 1.6 ಕೋಟಿ, ಮನಗೂಳಿ ತಾಂಡಾದಲ್ಲಿ 35 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ, 16 ಲಕ್ಷ ರೂನಲ್ಲಿ ಸಿಸಿ ರಸ್ತೆ, ಮನಗೂಳಿ, ಕೂಡಗಿ, ಯರನಾಳ, ಗೊಳಸಂಗಿ ಸೇರಿ 9 ಗ್ರಾಮಗಳಲ್ಲಿ ತಲಾ 22 ಲಕ್ಷ ರೂ. ಅನುದಾನದಲ್ಲಿ ಎಪಿಎಂಸಿ ಗೋಡಾವನ, 50 ಲಕ್ಷ ರೂನಲ್ಲಿ ಮುಚ್ಚು ಹರಾಜು ಮಾರುಕಟ್ಟೆ, 2.5 ಕೋಟಿ ರೂ. ಪಟ್ಟಣದಲ್ಲಿ ನಿರಂತರ ನೀರು 24್ಡ7 ಯೋಜನೆ ಸೇರಿ ವಿವಿಧ ಕಾಮಗಾರಿಗಳಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು.