ಮಾತೆ, ಮಹಾತ್ಮರಿಗೆ ಸಿಗಲಿ ಗೌರವ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ
ಮಾತೆ, ಮಹಾತ್ಮ ಹಾಗೂ ಪರಮಾತ್ಮ ಈ ಮೂವರಿಗೆ ಗೌರವ ಸಿಗುವ ಸ್ಥಳದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲಸಿರುತ್ತದೆ ಎಂದು ಬಾಳೆಹೊಸೂರದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಿಶ್ಲೇಷಿಸಿದ್ದಾರೆ.

ಖೇರ್ಡಾ (ಬಿ) ಗ್ರಾಮದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಶ್ರೀ ವಿಶ್ವನಾಥ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ 1111 ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಮಹಿಳಾ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಮಾತೆ ಆಶ್ರಯ, ತಾರುಣ್ಯ ಮಹಾತ್ಮರ ಮತ್ತು ವೃದ್ಧಾಪ್ಯ ಪರಮಾತ್ಮನ ಸ್ಮರಣೆಯಲ್ಲಿ ಕಳೆದಾಗಲೇ ಜೀವನದಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.

ಭಾರತ ಮತ್ತು ವಿದೇಶಿ ಸಂಸ್ಕೃತಿಗೆ ಸಾಕಷ್ಟು ವ್ಯತ್ಯಾಸವಿದೆ. ಮಾತೆ ಪ್ರಧಾನ ದೇಶ ನಮ್ಮದು. ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಮಾತೆಯರಿಗೆ ಉಡಿ ತುಂಬಿ ಗೌರವಿಸುವ ಮೂಲಕ ಶ್ರೀ ವಿಶ್ವನಾಥ ದೇವರು ದೇಶದ ಭವ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದ್ದಾರೆ. ಮಾತೆಯರಿಗೆ ಗೌರವಿಸುವ ಅಪೂರ್ವ ದೃಶ್ಯ ಕಣ್ತುಂಬಿಕೊಳ್ಳಲು ವೇದಿಕೆ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಮಠವೇ ಸಮಾಜದ ಆಸ್ತಿ. ರಕ್ಷಣೆ ಮತ್ತು ಬೆಳವಣಿಗೆ ಸಮಾಜದ ಜವಾಬ್ದಾರಿ. ಭಾನುವಾರ ಮಠಕ್ಕೆ ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ. ಪೀಠಾಧಿಪತಿ ಆಗಲಿರುವ ಶ್ರೀ ವಿಶ್ವನಾಥ ದೇವರಿಗೆ ಭಕ್ತರು ಸಹಕಾರ ಮತ್ತು ಸ್ವಾತಂತ್ರೃ ನೀಡುವ ಮೂಲಕ ಸಮಾಜಪರ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹಿತನುಡಿ ಹೇಳಿದರು.

ಮೆಹಕರದ ಶಿಕ್ಷಕಿ ಶ್ರೀದೇವಿ ಖಂಡಾಳೆ ವಿಶೇಷ ಉಪನ್ಯಾಸ ನೀಡಿ, ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರೂ ರಾಜಕೀಯದಲ್ಲಿ ಪ್ರಗತಿಗೆ ಪುರುಷ ಸಮಾನ ಅವಕಾಶ ಸಿಗುತ್ತಿಲ್ಲ. ಶಿಕ್ಷಣ, ಸಂಗೀತ, ಕ್ರೀಡೆ, ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಮಹಿಳೆಯರು ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದರು.

ಗಡಿಗೌಂಡಗಾಂವದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಜಗದ್ಗುರು ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ, ಚಿಕ್ಕತೊಟ್ಟಿಲುಕೆರೆ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ, ಅಂಬೆಜೋಗಾಯಿನ ಶ್ರೀ ಶಂಭುಲಿಂಗ ಶಿವಾಚಾರ್ಯ, ನೇರದಗುಂಬನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇತರರು ಸಮ್ಮುಖ, ನೇತೃತ್ವ ವಹಿಸಿದ್ದರು.