ಬಸವಕಲ್ಯಾಣ: ಸೈನಿಕರು ಈ ದೇಶದ ಅಮೂಲ್ಯ ಆಸ್ತಿ. ಸೀಮೆಯಲ್ಲಿ ದೇಶ ಕಾಯುವ ಸೈನಿಕರಿಂದಾಗಿ ದೇಶ ಸುರಕ್ಷಿತವಾಗಿದ್ದಲ್ಲದೆ ನಾವೆಲ್ಲ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದು ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ, ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನ ನಿಮಿತ್ತ ಹರಳಯ್ಯ ಗವಿಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಮಾಚಿದೇವ- ಮಲ್ಲಿಬೊಮ್ಮ ವೀರ ಸೈನಿಕರ ವೇದಿಕೆ ಗೋಷ್ಠಿ ಉದ್ಘಾಟಿಸಿದ ಅವರು, ಹುತಾತ್ಮರ ಸ್ಮರಣಾರ್ಥ ವೇದಿಕೆಯಲ್ಲಿ ಸೈನಿಕರನ್ನು ಸನ್ಮಾನಿಸಿರುವುದು ಸಂತಸ ತಂದಿದೆ ಎಂದರು.
ಸೈನಿಕರು, ರೈತರು ಹಾಗೂ ಸಂತ-ಮಹಾಂತರಿಂದಲೇ ದೇಶ ಚೆನ್ನಾಗಿದೆ. ಬಸವಕಲ್ಯಾಣ ಮತ್ತೊಮ್ಮೆ ಮೈಕೊಡವಿಕೊಂಡು ಮೇಲೆದ್ದು, ಕಲ್ಯಾಣ ಭಾರತವಷ್ಟೇ ಅಲ್ಲ ಜಗತ್ತಿನ ಮಾನವೀಯತೆ ಕಲ್ಯಾಣವಾಗಿಸಲು ನಾವೆಲ್ಲ ಕೆಲಸ ಮಾಡೋಣ ಎಂದು ಹೇಳಿದರು.
ಸೇವಾವಧಿಯ ಅನುಭವ ಹಂಚಿಕೊAಡ ನಿವೃತ್ತ ಕರ್ನಲ್ ವೆಂಕಟರೆಡ್ಡಿ ಬೆಂಗಳೂರು ಮಾತನಾಡಿ, ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಂದೇಶ ಸಾರಿದ ಈ ನೆಲ ಅತ್ಯಂತ ಪವಿತ್ರವಾದದ್ದು. ಇಂಥ ಭೂಮಿಯಲ್ಲಿ ಸೈನಿಕರ ಸೇವೆ ಗುರುತಿಸಿ ಗೌರವಿಸಿರುವುದು ಶ್ಲಾಘನೀಯ. ದೇಶಕ್ಕಾಗಿ ಕೊಡುಗೆ ನೀಡಬೇಕೆಂಬ ಚಿಂತನೆ ಮಕ್ಕಳಲ್ಲಿ ತುಂಬಿ ಆತ್ಮವಿಶ್ವಾಸ, ಧೈರ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಅನ್ಯಾಯದ ವಿರುದ್ಧ ಹೋರಾಡಿದ ವೀರ ಭೂಮಿ ಬಸವಕಲ್ಯಾಣ. ನಾವೆಲ್ಲರೂ ಒಂದೇ ಎಂಬ ಭಾವನೆ ಬಂದಾಗಲೇ ದೇಶ ಗಟ್ಟಿಗೊಳ್ಳುತ್ತದೆ. ಮಕ್ಕಳಿಗೆ ವೀರರ ಚರಿತ್ರೆ ತಿಳಿಹೇಳುವ ಅಗತ್ಯವಿದೆ ಎಂದರು.
ಮಾಜಿ ಸೈನಿಕರ ಸಂಘ ಬಸವಕಲ್ಯಾಣದ ಗೌರವಾಧ್ಯಕ್ಷ ಸೂರ್ಯಕಾಂತ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಮಾಜಿ ಸೈನಿಕರ ಸಂಘದ ಸದಸ್ಯ ಡಾ.ವಿ.ಕೆ. ತೆಲಂಗ, ಜಿಲ್ಲಾಧ್ಯಕ್ಷ ರಾಜಕುಮಾರ ಕದ್ದೆ, ತಾಲೂಕು ಅಧ್ಯಕ್ಷ ಬಾಬುರಾವ ಗೋರ್ಟೆ, ಸಿದ್ರಾಮಪ್ಪ ಬೇಲೂರೆ, ಓಂಕಾರ ಬಿರಾದಾರ, ರಾಮಲಿಂಗ ಜೋಕಾರೆ ಇತರರಿದ್ದರು.
ನಿವೃತ್ತ ಪ್ರಾಂಶುಪಾಲ ಸಿದ್ದಣ್ಣ ಮರಪಳ್ಳೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಣೆ ಮಾಡಿದರು. ಕು. ಶ್ರದ್ಧಾ ಮತ್ತು ಶ್ರೀಕಾಂತ ಸೀತಾರ ದೇಶಭಕ್ತಿ ಗೀತೆಗಳನ್ನು ಹಾಡಿದರು. ಜ್ಞಾನಭಾರತಿ ಪ್ರಾಥಮಿಕ ಶಾಲೆ ಮಕ್ಕಳು ನಡೆಸಿಕೊಟ್ಟ ಕಾರ್ಗಿಲ್ ವಿಜಯ ನೃತ್ಯರೂಪಕ ಗಮನ ಸೆಳೆಯಿತು. ವಿದ್ಯಾವತಿ ಸಿದ್ದಣ್ಣ ಮರಪಳ್ಳೆ ಭಕ್ತಿ ದಾಸೋಹಗೈದರು. ಸಾಹಿತಿ ಸಂಗಮೇಶ ಜವಾದಿ ಬರೆದ ಸೇವೆಯೇ ಶ್ರೇಷ್ಠ ಜೀವನ ಗ್ರಂಥ ಬಿಡುಗಡೆ ಮಾಡಿ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇಶದ ಮೇಲೆ ಚೀನಾ ಆಕ್ರಮಣ ಮಾಡಿದಾಗ ಕೈಯಲ್ಲಿ ಬಂದೂಕು, ಚಳಿಯಲ್ಲಿ ಉಡಲು ಬೆಚ್ಚನೆಯ ಉಡುಪು ಇಲ್ಲದೆ ಅದೆಷ್ಟೋ ಸೈನಿಕರು ಹುತಾತ್ಮರಾದರು. ಕೆಟ್ಟ ಕಾಲದಲ್ಲಿ ಸೈನಿಕ ಶಕ್ತಿಗೆ ಆತ್ಮವಿಶ್ವಾಸ, ಬಲ ತುಂಬಿದ ರಾಷ್ಟ್ರೀಯ ನಾಯಕ ಲಾಲ್ ಬಹಾದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯದೊಂದಿಗೆ ಸೈನಿಕರಿಗೆ ಗೌರವ ಕೊಟ್ಟ ಮಹಾ ನಾಯಕ.
| ಡಾ.ಬಸವರಾಜ ಪಾಟೀಲ್ ಸೇಡಂ ಮುಖ್ಯ ಸಂಯೋಜಕ, ವಿಕಾಸ ಅಕಾಡೆಮಿ