ಕಿರೀಟಧಾರಿ ಬಸವಣ್ಣ ಈಗಲೂ ಪ್ರಸ್ತುತ, ಈಗಿನ ರಾಜಕಾರಣಿಗಳಿಗೆ ಆದರ್ಶ: ಬಸವ ಮರುಳಸಿದ್ದ ಸ್ವಾಮೀಜಿ

ಬೆಂಗಳೂರು: ಕಿರೀಟ ಧರಿಸಿರುವ ಬಸವಣ್ಣ ಒಬ್ಬ ರಾಜಕಾರಣಿಯಾಗಿ ಈಗಿನ ರಾಜಕಾರಣಿಗಳಿಗೆ ಈಗಲೂ ಆದರ್ಶವಾಗಿದ್ದಾರೆ ಎಂದು ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ದುಬೈ ಬಸವ ಸಮಿತಿ ಇಲ್ಲಿನ ಜೆಎಸ್ಎಸ್ ಇಂಟರ್​ನ್ಯಾಷನಲ್​ ಪ್ರೈವೇಟ್ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಅವರ 886ನೇ ಜಯಂತಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಷ್ಟಲಿಂಗ ಪೂಜೆ ಮಾಡುವ ಬಸವಣ್ಣ ಧಾರ್ಮಿಕವಾಗಿ ಸರಳ ಆಚರಣೆಯನ್ನು ತೋರಿಸಿಕೊಟ್ಟರು. ವಚನಗಳ ಮೂಲಕ ಕಠಿಣ ವಿಷಯಗಳನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಮಾಡಿದರು. ಮೂರನೆಯದಾಗಿ ಕಿರೀಟ ಧರಿಸಿರುವ ಬಸವಣ್ಣನ ಈಗಿನ ರಾಜಕಾರಣಿಗಳಿಗೆ ಸ್ಪೂರ್ತಿ. ಬಸವಣ್ಣ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರರಹಿತ ಅಧಿಕಾರ ನಡೆಸಿದರು. ಹಾಗಾಗಿ ಅವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯ ಎಂದರು.

ಬಿಜ್ಜಳ ಮಹಾರಾಜ ಬಸವಣ್ಣನ ಆಡಳಿತ ವೈಖರಿ ಬಗ್ಗೆ ಆಕ್ಷೇಪಿಸಿದಾದ ಬಸವಣ್ಣ ತಮ್ಮ ತಲೆಯ ಮೇಲಿನ ಕಿರೀಟ ತೆಗೆದಿಟ್ಟು ಅಧಿಕಾರ ತ್ಯಾಗ ಮಾಡಿದರು. ಈಗಿನ ರಾಜಕಾರಣಿಗಳ ಹಾಗೆ ಅಧಿಕಾರಕ್ಕಾಗಿ ಯಾವುದೇ ರೀತಿಯ ಕುದುರೆ ವ್ಯಾಪಾರ ಮಾಡಲಿಲ್ಲ. ಅದೇ ಕಾರಣಕ್ಕೆ ಶರಣನಾಗಿ ಕೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುತ್ತಿರುವ ಬಸವಣ್ಣ ಎಷ್ಟು ಮುಖ್ಯವೋ ರಾಜಕಾರಣಿಯಾಗಿ ಕಿರೀಟ ಹಾಕಿಕೊಂಡಿರುವ ಬಸವಣ್ಣನವರೂ ಈಗಿನ ಕಾಲಕ್ಕೆ ಅಷ್ಟೇ ಪ್ರಸ್ತುತರೆನಿಸುತ್ತಾರೆ ಎಂದು ಹೇಳಿದರು.

ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರು ಮಾತನಾಡಿ, ಸಾಗರದಾಚೆ ದುಬೈನಂತ ನಗರದಲ್ಲಿ ಬಸವಣ್ಣನ ಸಮಾನತೆ ತತ್ವ ಹಾಗೂ ಕನ್ನಡವನ್ನ ಜೀವಂತವಾಗಿಟ್ಟ ವಚನ ಸಾಹಿತ್ಯವನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಭಾರತದಲ್ಲಿರುವ ಬಸವಾಭಿಮಾನಿಗಳಿಗೂ ಮಾದರಿ ಎಂದರು.

ಜಡೆ ಸಂಸ್ಥಾನ ಮಠದ ಮಹಾಂತಸ್ವಾಮೀಜಿ ಯೋಗ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಜಿ ಕನ್ನಡ ಸರಿಗಮಪ ರಿಯಾಲಿಟಿ ಶೋ ಪ್ರಶಸ್ತಿ ವಿಜೇತ ಚೆನ್ನಪ್ಪ ಹುದ್ದಾರ್ ಗಾಯನ, ಮಾತನಾಡಿಸುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್ ಅವರ ಗೊಂಬೆ ಮಾತು ಜನರ ಮನಸೂರೆಗೊಂಡವು.

ದುಬೈ ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಸಂಗಮೇಶ್ ಬಿಸರಳ್ಳಿ, ಮಲ್ಲಿಕಾರ್ಜುನ ಮುಳ್ಳೂರು, ಸತೀಶ್ ಹಿಂಡೇರ್, ರುದ್ರಯ್ಯ ನವಲಿ ಹಿರೇಮಠ, ಮಮತಾ ರಡ್ಡೇರ್, ಜಗದೀಶ್ ಲಾಲಿ, ಮುರುಗೇಶ್ ಗಾಜರೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *