ಬಸವ ತತ್ತ್ವದಲ್ಲಿ ನಡೆಯುವವ ಶರಣ

ಕೂಡಲಸಂಗಮ: ಜಾತಿ ಲಿಂಗಾಯತರು ಲಿಂಗಾಯತರಲ್ಲ, ಬಸವ ತತ್ತ್ವದಲ್ಲಿ ನಡೆಯುವವರು ನೈಜ ಲಿಂಗಾಯತರು. ಆದರೆ ಇಂದು ಬಹುಸಂಖ್ಯಾತ ಲಿಂಗಾಯತ ತಲೆಗಳು ಬ್ರಾಹ್ಮಣೀಕರಣ, ಶೈವೀರಕಣಗೊಂಡಿವೆ ಎಂದು ಬೆಂಗಳೂರು ಚನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಲ್ಲಿ 32ನೇ ಶರಣ ಮೇಳದ ಅಂಗವಾಗಿ ಶನಿವಾರ ಜರುಗಿದ ರಾಷ್ಟ್ರೀಯ ಬಸವ ದಳದ 32ನೇ ಅಧಿವೇಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರನ್ನು ಪೂಜೆಗೆ ಸೀಮಿತಗೊಳಿಸದೆ, ಅವರ ತತ್ತ್ವಗಳನ್ನು ಪ್ರಚಾರ ಮಾಡಿ. ಲಿಂಗಾಯತರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.

ವೈದಿಕ ಮನಸ್ಥಿತಿಗಳು ಲಿಂಗಾಯತ ಧರ್ಮ ವಿರೋಧಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಹಿತ ಲಿಂಗಾಯತ ಧರ್ಮದ ಮಾನ್ಯತೆ ವಿರೋಧಿಸುತ್ತಿರುವುದು ದುರಂತ ಎಂದರು.

20 ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರು ಇಡಬೇಕು ಎಂಬ ಹೋರಾಟದ ತೀವ್ರತೆ ಅರಿತು ಅಂದಿನ ಮುಖ್ಯಮಂತ್ರಿ ದೇವೆಗೌಡ ಹೋರಾಟ ಸ್ಥಳಕ್ಕೆ ಆಗಮಿಸಿದ್ದರು. ಆದರೆ ವಿವಿಗೆ ಹೆಸರಿಡದೆ ವಚನ ಭ್ರಷ್ಟರಾದರು ಎಂದು ದೂರಿದರು.

ಸಾಹಿತಿ ಗಂಗಾಂಬಿಕಾ ಬಸವರಾಜ ಮಾತನಾಡಿ, ವಚನ ಸಾಹಿತ್ಯಕ್ಕಿಂತ ಶ್ರೇಷ್ಠ ಸಾಹಿತ್ಯ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಯುವ ಜನಾಂಗ ವಚನ ಸಾಹಿತ್ಯ ಅಧ್ಯಯನ ಮಾಡಿ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಮಾತೆ ಶಾರದಾ ಮಾತನಾಡಿದರು. ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಕಾರ್ಯಕ್ರಮ ಉದ್ಘಾಟಿಸಿದರು.

ನಾಗಶೆಟ್ಟಿ ಶೆಟಗಾರ, ಮಹಾದೇವ ಬೇಲೂರೆ, ಧನರಾಜ ಜೀರಗಿ, ಮಹಾಂತೇಶ ಕುರಿ, ಬಸವರಾಜ ಗೊಂಡ ಗುಳಿ, ಕೆ. ಬಸವರಾಜ ಇತರರಿದ್ದರು.