ಸಾಧನೆಗೆ ಮಾರ್ಗ ತೋರಿಸಿದ ಸಾಧಕರು

ವಿಜಯವಾಣಿ ಸುದ್ದಿಜಾಲ ಬೀದರ್
ಬಸವ ಗಿರಿಯಲ್ಲಿ ವಚನ ವಿಜಯೋತ್ಸವ ನಿಮಿತ್ತ ಸೋಮವಾರ ನಡೆದ ಯುವ ಜಾಗೃತಿ ಸಮಾವೇಶ ನೆರೆದವರಲ್ಲಿ ಪ್ರೇರಣೆ ತುಂಬಿತು. ಶ್ರೇಷ್ಠ ಸಾಧನೆ ಜತೆಗೆ ಉತ್ತಮ ಬದುಕಿಗೂ ಸರಳ ಮಾರ್ಗಗಳನ್ನು ತೋರಿಸಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಯುವಕರಂತೂ ಹೊಸ ಭರವಸೆ ಕಟ್ಟಿಕೊಂಡು ಖುಷ್ ಆಗಿ ಮರಳಿದರು.

ಡೈನಾಮಿಕ್ ಐಪಿಎಸ್ ಅಧಿಕಾರಿಯಾದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್, 16 ವರ್ಷದವರೆಗೆ ಶಾಲೆ ಮೆಟ್ಟಿಲೇರದೆ ಇಂಗ್ಲಿಷ್ನಲ್ಲಿ ಪ್ರಬುದ್ಧತೆ ಸಾಧಿಸಿ ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿರುವ ದೇವದುರ್ಗದ ರಮೇಶ ಬಲ್ಲಿದ್, ಬೆಳಗಾವಿ ಗುಪ್ತಚರ ವಿಭಾಗದ ಎಸ್ಪಿ ಎಸ್.ಎಲ್.ಚೆನ್ನಬಸವಣ್ಣ ಹಾಗೂ ಜಪಾನ್ನಲ್ಲಿ ಅಂತಾರಾಷ್ಟ್ರೀಯ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಡ್ರೋಣ್ ಸಂಶೋಧನೆಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಮಂಡ್ಯದ ಎನ್.ಎಂ. ಪ್ರತಾಪ ಮಳವಳ್ಳಿ ತಮ್ಮ ಭಾಷಣದಲ್ಲಿ ಸಾಧನೆಗಿರುವ ಹಾದಿಗಳನ್ನು ವಿವರಿಸಿದರು.

ಕಷ್ಟ, ಬಡತನ, ಅವಮಾನ, ವೈಫಲ್ಯಗಳೇ ಯಶಸ್ಸಿನ ಹೇಗೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ತಮ್ಮದೇ ಉದಾಹರಣೆ ನೀಡಿ ಚಿಂತನೆಗೆ ಹಚ್ಚಿದರು. ಪ್ರತಿಭೆ ಎಲ್ಲರಲ್ಲೂ ಇದೆ. ಇದು ಯಾರದೋ ಕೆಲವರ ಸ್ವತ್ತಲ್ಲ ಎಂದು ಹೇಳಿ ಸ್ಫೂತರ್ಿ ತುಂಬಿದರು.

ಉತ್ತಮ ಸಾಧನೆ ಮಾಡಲು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಬಹಳ ಓದುವ, ತಿಳಿದುಕೊಳ್ಳುವ ಅಗತ್ಯವಿಲ್ಲ. ಒಂದು ವಚನ, ಒಂದು ನಾಣ್ಣುಡಿ ಸಾಲು ಅರ್ಥ ಮಾಡಿಕೊಂಡು ಹೆಜ್ಜೆಯಿಟ್ಟರೂ ಅಗಾಧ ಸಾಧನೆ ಮಾಡಬಹುದು. ಕಳಬೇಡ, ಕೊಲಬೇಡ ಎಂಬ ಒಂದೇ ವಚನ ಎಲ್ಲರೂ ಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೆ ಪೊಲೀಸ್ ಇಲಾಖೆ, ಕೋಟರ್್ ಅವಶ್ಯಕತೆಯೇ ಇಲ್ಲ. ಸತ್ಯ ಹರಿಶ್ಚಂದ್ರ ನಾಟಕ ಗಾಂಧೀಜಿ ಅವರನ್ನು ಮಹಾತ್ಮರನ್ನಾಗಿ ಮಾಡಿತು. ಶವ, ವೃದ್ಧ, ರೋಗಿ, ಸಂನ್ಯಾಸಿಯ ನಾಲ್ಕು ದೃಶ್ಯ ಸಿದ್ಧಾರ್ಥನನ್ನು ಬುದ್ಧನಾಗಿಸಿತು. ಸತ್ಯ ಪಥ ಕಷ್ಟವಿದೆ. ಆದರೆ ತೃಪ್ತಿ ಇದೆ. ನಿಷ್ಠೆ, ಪ್ರಾಮಾಣಿಕತೆ, ಶ್ರಮ, ಆತ್ಮವಿಶ್ವಾಸ, ಛಲ ನಮ್ಮನ್ನು ಶ್ರೇಷ್ಠ ಗುರಿಯತ್ತ ಒಯ್ಯುತ್ತವೆ ಎಂದು ರವಿ ಚನ್ನಣ್ಣನವರ್ ಹೇಳಿದರು.

ದಯವೇ ಧರ್ಮದ ಮೂಲ, ಹಸಿವಿದ್ದವನಿಗೆ ಅನ್ನ ಕೊಡಿ, ನೆರಳಿಲ್ಲದವನಿಗೆ ಆಶ್ರಯ ನೀಡಿ, ನೀವೂ ಬದುಕಿ ಇತರರಿಗೂ ಬದುಕಲು ಬಿಡಿ, ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ ಎಂದೇ ಎಲ್ಲ ಧರ್ಮಗಳು, ಗ್ರಂಥಗಳು ಸಾರಿವೆ. ಉಪನಿಷತ್ ಸಹ ಇದನ್ನೇ ಪ್ರತಿಪಾದಿಸಿದೆ. ಮನುಷ್ಯನ ಬದುಕು ಸರಳ, ಉತ್ತಮಗೊಳಿಸುವುದೇ ಶಿಕ್ಷಣ. ಕೇವಲ ಅಂಕದಿಂದ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ. ಅವರವರ ಜ್ಞಾನ, ಸಮಾಜಪರ ಚಿಂತನೆಯಿಂದ ಇದು ಗೊತ್ತಾಗುತ್ತದೆ. ಸತ್ಯ ಪಥದಲ್ಲಿ ಉತ್ತಮ ಗುರಿ ಹೊಂದಿ ಹೆಜ್ಜೆ ಇಟ್ಟರೆ, ಆಯ್ದುಕೊಂಡ ವೃತ್ತಿಯಲ್ಲೇ ಬೇಕಾದಷ್ಟು ಸಾಧನೆ ಮಾಡಬಹುದು. ಇದಕೆ ್ಕಕೃಷಿಯೂ ಹೊರತಾಗಿಲ್ಲ ಎಂದರು.

ಜಿಪಂ ಸಿಇಒ ಮಹಾಂತೇಶ ಬೀಳಗಿ ಉದ್ಘಾಟಿಸಿದರು. ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಜಿ.ಪೂಣರ್ಿಮಾ, ಪ್ರಮುಖರಾದ ಮಾರುತಿ ಬೌದ್ಧೆ, ಜ್ಞಾನಿ ದರ್ಬಾರಾಸಿಂಗ್, ಡಾ.ವಿ.ಸಿ. ಪಾಟೀಲ್, ಶಾಮರಾವ ಭೀಮರಾವ ಇತರರಿದ್ದರು. ರಮೇಶ ಮಠಪತಿ ನಿರೂಪಣೆ ಮಾಡಿದರು. ಜ್ಞಾನಸುಧಾ ಶಾಲೆ ಮಕ್ಕಳಿಂದ ಮೂಡಿಬಂದ ಅಮ್ಮ ನಾಟಕ ಸಭಿಕರ ಮನ ಮಿಡಿಯುವಂತೆ ಮಾಡಿತು.