ನೆರೆ ಸಂತ್ರಸ್ತರಿಗೆ ನೇರವಾಗಿ ನೆರವು

ಬಸರಾಳು(ಮಂಡ್ಯ): ಭೀಕರ ಮಳೆಯಿಂದಾಗಿ ಬದುಕನ್ನೇ ಕಳೆದುಕೊಂಡಿರುವ ಕೊಡಗಿನ ಸಂತ್ರಸ್ತರಿಗೆ ಜಿಲ್ಲೆಯ ಜನತೆ ನೆರವು ನೀಡುವುದು ಮುಂದುವರಿದಿದೆ.

ಈ ನಡುವೆ ತಾಲೂಕಿನ ಗರುಡನಹಳ್ಳಿ ಗ್ರಾಮಸ್ಥರು ಒಂದು ಹೆಜ್ಜೆ ಮುಂದಿಟ್ಟಿದ್ದು, ಮಾನವೀಯತೆ ಮೆರೆದಿದ್ದಾರೆ. ಅಂದರೆ ಕೊಡಗಿನ ಜನರಿಗೆ ನೀಡುತ್ತಿರುವ ಪರಿಹಾರ ಕಳ್ಳರ ಪಾಲಾಗುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಗ್ರಾಮದ ಜನತೆ ನೇರವಾಗಿ ಪರಿಹಾರ ಕೇಂದ್ರಕ್ಕೆ ತೆರಳಿ ಪರಿಹಾರ ವಿತರಿಸಿದ್ದಾರೆ.

ಮೂರು ದಿನಗಳಿಂದ ಗ್ರಾಮದಲ್ಲಿ 15 ಕ್ವಿಂಟಾಲ್ ಅಕ್ಕಿ, 500 ತೆಂಗಿನಕಾಯಿ, ವಿವಿಧ ಕಾಳುಗಳನ್ನು ನಾಲ್ಕು ಚೀಲಗಳಲ್ಲಿ ತುಂಬಿಕೊಂಡು ಬೆಳಗ್ಗೆ ಸೋಮವಾರ ಪೇಟೆ ತಾಲೂಕಿನ ಕುಮಾರಳ್ಳಿ, ಬಾಚಳ್ಳಿ ಗ್ರಾಮಗಳ ಸಂತ್ರಸ್ತರು ಇದ್ದ ಪರಿಹಾರ ಕೇಂದ್ರಕ್ಕೆ ‘ವಿಜಯವಾಣಿ’ ಪತ್ರಿಕೆಯ ಸಹಯೋಗದೊಂದಿಗೆ ತೆರಳಿ ತಾವೇ ನೇರವಾಗಿ ಸಂಕಷ್ಟದಲ್ಲಿರುವ ಜನರಿಗೆ ವಿತರಿಸಿದರು.

ಗ್ರಾಮದಲ್ಲಿ ಸಂಗ್ರಹಿಸಿದ್ದ ದವಸ ಧಾನ್ಯಗಳನ್ನು ಗರುಡನಹಳ್ಳಿ ಗ್ರಾಮದ ರಂಜಿತ್ ಮತ್ತವರ ಸ್ನೇಹಿತರು ಸೋಮವಾರಪೇಟೆಯ ಪರಿಹಾರ ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿದ್ದ 120 ಸಂತ್ರಸ್ತ ಕುಟುಂಬದವರಿಗೆ ಸಮನಾಗಿ ವಿತರಿಸಿದರು.

ಪರಿಹಾರ ಸ್ವೀಕರಿಸಿದವರ ಪರವಾಗಿ ಮಾತನಾಡಿದ ಮುಖಂಡ ಚನ್ನಪ್ಪ, 17ನೇ ತಾರೀಖಿನಿಂದ ನಾವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿದ್ದೇವೆ. ನಮ್ಮ ಕಷ್ಟಕ್ಕೆ ಮಂಡ್ಯದಿಂದ ಬಂದು ಸ್ಪಂದಿಸುತ್ತಿರುವುದಕ್ಕೆ ಎಲ್ಲ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.