ಮಂಡ್ಯ: ಹಲವು ದಶಕದ ಹಿಂದೆ ಕಾಶಿಯಿಂದ ಬಂದು ತಾಲೂಕಿನ ಬಸರಾಳು ಗ್ರಾಮದಲ್ಲಿ ನೆಲೆಸಿದ ಕಾಲಭೈರವೇಶ್ವರಸ್ವಾಮಿ ಭಕ್ತರ ಕಷ್ಟಗಳನ್ನು ದೂರ ಮಾಡುವ ಶಕ್ತಿದೇವರಾಗಿದ್ದಾರೆ. ವಿಶೇಷವೆಂದರೆ ಗ್ರಾಮದಲ್ಲಿ ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತವೆ. ಇದು ಭಕ್ತರು ದೈವದ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ.
ಕಾಲಭೈರವೇಶ್ವರಸ್ವಾಮಿ ಸೇರಿದಂತೆ ವಿವಿಧ ಪುರಾತನ ದೇವಾಲಯಗಳು ಹೊಯ್ಸಳ ಶೈಲಿಯ ಶಿಲ್ಪಕಲೆಗಳನ್ನು ಒಳಗೊಂಡಿದೆ. ಸುಂದರ ವಾಸ್ತುಶಿಲ್ಪದಿಂದ ಕೆತ್ತನೆಯಾಗಿವೆ. ಗ್ರಾಮದ ದೇವಸ್ಥಾನ ರಾಜ್ಯದಲ್ಲಿಯೇ ಖ್ಯಾತಿ ಪಡೆದಿವೆ. ಮಂಡ್ಯ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಅಂತೆಯೇ ವಿದೇಶಿಗರು ಇಲ್ಲಿನ ದೇವಸ್ಥಾನದ ಶಿಲ್ಪಕಲೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕಾಶಿಯಿಂದ ಬಸರಾಳಿಗೆ ಬಂದ ದೈವ: ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗ್ರಾಮದ ನಿವಾಸಿಗಳಾದ ಬ್ರಾಹ್ಮಣ ಸಮುದಾಯದ ಲಿಂಗಣ್ಣಯ್ಯ ಹಾಗೂ ವಿಶ್ವನಾಥಯ್ಯ ಎಂಬ ಸಹೋದರರು ಸುಮಾರು 400 ವರ್ಷದ ಹಿಂದೆ ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹೋಗುತ್ತಾರೆ. ಅಲ್ಲಿಯೇ ಮೂರು ದಿನ ತಂಗಿದ್ದು, ಕಾಶಿ ವಿಶ್ವನಾಥ ಹಾಗೂ ಕಾಶಿ ಕಾಲಭೈರವನ ದರ್ಶನ ಪಡೆದು ಮರಳಿ ಊರಿಗೆ ವಾಪಸ್ ಹೊರಡುವ ಹಿಂದಿನ ರಾತ್ರಿ ಕಾಲಭೈರವೇಶ್ವರ ಸ್ವಾಮಿಯು ಲಿಂಗಣ್ಣಯ್ಯ ಅವರ ಕನಸಿನಲ್ಲಿ ಬಂದು ನಾನು ನಿನ್ನೊಟ್ಟಿಗೆ ಬಸರಾಳು ಗ್ರಾಮಕ್ಕೆ ಬರಲು ಬಯಸಿದ್ದೇನೆ. ಆದ್ದರಿಂದ ನನಗೆ ನೆಲಸಲು ಸ್ಥಳ ಮಾಡು. ಸಾಲಿಗ್ರಾಮದ ರೂಪದಲ್ಲಿ ಬರುತ್ತೇನೆ ಎಂದು ಪ್ರೇರಣೆಯಾಗುತ್ತದೆ. ಅಂತೆಯೇ ಸಾಲಿಗ್ರಾಮವು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ವೇಳೆ ಎಚ್ಚರಗೊಂಡ ಲಿಂಗಣ್ಣಯ್ಯ ಕನಸಿನಲ್ಲಿ ಗೋಚರಗೊಂಡ ವಿಷಯವನ್ನು ವಿಶ್ವನಾಥಯ್ಯನಿಗೆ ತಿಳಿಸುತ್ತಾರೆ.
ಮರುದಿನ ಬೆಳಗ್ಗೆ ಗಂಗಾನದಿಯಲ್ಲಿ ಸ್ನಾನ ಮಾಡಲು ತೆರಳಿದ ಸಹೋದರರಿಗೆ ರಾತ್ರಿ ಕನಸಿನಲ್ಲಿ ಕಂಡಂತೆ ಸಾಲಿಗ್ರಾಮದ ಶಿಲೆ ದೊರೆಯುತ್ತದೆ. ಕನಸಿನಲ್ಲಿ ಕಂಡ ಹಾಗೂ ಸ್ನಾನ ಮಾಡುವಾಗ ಸಿಕ್ಕ ಸಾಲಿಗ್ರಾಮ ಶಿಲೆ ಒಂದೇ ಆಗಿರುತ್ತದೆ. ಕನಸಿನಲ್ಲಿಯೇ ಪ್ರೇರಣೆಯಾದಂತೆ ಸಾಲಿಗ್ರಾಮ ಶಿಲೆಯನ್ನು ತೆಗೆದುಕೊಂಡು ಕಾಲಭೈರವೇಶ್ವರ ಸ್ವಾಮಿ ಪಾದದ ಸನ್ನಿಧಿಯಲ್ಲಿಟ್ಟು ಪೂಜಿಸಿ ನಂತರ ಊರಿಗೆ ತೆರಳುತ್ತಾರೆ. ಬಳಿಕ ಕಾಲಭೈರವೇಶ್ವರ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಾಣ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಸಾಲಿಗ್ರಾಮ ಶಿಲೆ ಕಾಲಭೈರವೇಶ್ವರಸ್ವಾಮಿಯ ಮೂಲ ಮೂರ್ತಿಯ ಪಾದಗಳ ಬಳಿ ಇಟ್ಟು ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ. ಕಾಲಭೈರವೇಶ್ವರ ಸ್ವಾಮಿಗೆ ಸಲ್ಲಿಸುವ ಎಲ್ಲ ಪೂಜೆಯೂ ಸಾಲಿಗ್ರಾಮಕ್ಕೂ ಇರುತ್ತದೆ.
ಕಾಶಿಯಿಂದ ತಂದ ಸಾಲಿಗ್ರಾಮ ಈಗಲೂ ಸಹ ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಿದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇನ್ನು 400 ವರ್ಷದ ಹಿಂದೆ ಪ್ರತಿಷ್ಠಾಪಿಸಿದ್ದ ಕಾಲಭೈರವೇಶ್ವರ ಕಲ್ಲಿನ ಮೂರ್ತಿಯನ್ನು ಎಂಟು ವರ್ಷದ ಹಿಂದೆ ಬದಲಾಯಿಸಲಾಗಿದೆ. ನೂತನ ಕಾಲಭೈರವೇಶ್ವರ ಸ್ವಾಮಿಯ ಮೂರ್ತಿಯನ್ನು ಕೆತ್ತಿಸಿ ಸಂಪ್ರದಾಯಗಳ ಪ್ರಕಾರ ಪ್ರತಿಷ್ಠಾಪಿಸಲಾಗಿದೆ. ಇನ್ನು ಹಿಂದೆ ಬಸರಾಳು ಹೊಯ್ಸಳರ ಕಾಲದಲ್ಲಿ ದೊಡ್ಡ ಪಟ್ಟಣವಾಗಿತ್ತು ಎಂಬುದಾಗಿ ತಿಳಿದುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಾಸನವನ್ನು ಕಾಣಬಹುದಾಗಿದೆ. ಕಾಲಭೈರವೇಶ್ವರ ಸ್ವಾಮಿ ದೇವಾಲಯ ಸಮಿತಿಯು ದೇವಸ್ಥಾನದ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
ವಾರಗಟ್ಟಲೇ ನಡೆಯುವ ಜಾತ್ರೆ: ಕಾಲಭೈರವೇಶ್ವರ ಸ್ವಾಮಿಗೆ ಪ್ರತಿ ಭಾನುವಾರ ವಿಶೇಷ ಅಭಿಷೇಕ ಬೆಣ್ಣೆ ಅಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರ ನಡೆಯುತ್ತದೆ. ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ಭಕ್ತರು ಕಾಲಭೈರವೇಶ್ವರಸ್ವಾಮಿಗೆ ತುಪ್ಪದ ದೀಪ, ಅಭಿಷೇಕ, ಬೆಣ್ಣೆ ಅಲಂಕಾರ ಸೇರಿದಂತೆ ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆಯಲ್ಲಿ ತುಂಬಿಟ್ಟಿನ ಆರತಿ, ಮಳೆ ಆರತಿ, ಬಾಯಿ ಬೀಗ ಹಾಕಿಸಿಕೊಳ್ಳುವುದು ಹಾಗೂ ಕೊಂಡಕ್ಕೆ ಹರಳು ಹಾಕುವುದು, ತಲೆ ಮುಡಿ ಸೇವೆ ಸೇರಿದಂತೆ ಹಲವು ಬಗೆಯಲ್ಲಿ ತಮ್ಮ ಹರಕೆ ತೀರಿಸುತ್ತಾರೆ. ಪ್ರತಿ ವರ್ಷ ಯುಗಾದಿಗೆ ಮುನ್ನ ಕಾಲಭೈರವೇಶ್ವರಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತದೆ. ಒಂದು ವಾರ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ವಿವಿಧ ಬಗೆಯ ಉತ್ಸವಗಳು ಹಾಗೂ 12 ಮಾರು ಉದ್ದದ ಅಗ್ನಿಕೊಂಡೋತ್ಸವ ಇಲ್ಲಿನ ವಿಶೇಷ. ಇನ್ನು ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಪ್ರತಿ ಮನೆಯ ಹೆಣ್ಣು ಮಕ್ಕಳು ತಪ್ಪದೆ ಭಾಗವಹಿಸಿ ಸ್ವಾಮಿಗೆ ಸೇವೆ ಸಲ್ಲಿಸುವ ಸಂಪ್ರದಾಯ ಇದೆ.
ಮಾರ್ಗ: ಮಂಡ್ಯ ತಾಲೂಕು ಬಸರಾಳು ಹೋಬಳಿ ಕೇಂದ್ರವಾಗಿದೆ. ಮಂಡ್ಯ ಜಿಲ್ಲಾ ಕೇಂದ್ರದಿಂದ 23 ಕಿ.ಮೀ, ನಾಗಮಂಗಲ ಪಟ್ಟಣದಿಂದ 15 ಕಿ.ಮೀ, ಮೇಲುಕೋಟೆಯಿಂದ 25 ಕಿ.ಮೀ ದೂರವಿದೆ. ಮಂಡ್ಯ ಹಾಗೂ ನಾಗಮಂಗಲದಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸೌಲಭ್ಯವಿದೆ. ದೇವಸ್ಥಾನ ಗ್ರಾಮದ ಮಂಡ್ಯ-ನಾಗಮಂಗಲ ಮುಖ್ಯರಸ್ತೆಯ ಬಸ್ ನಿಲ್ದಾಣದ ಪಕ್ಕದಲ್ಲಿ ಇದೆ
