ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಉದ್ಧಟತನದ ಹೇಳಿಕೆಗಳನ್ನು ನೀಡಿದರೆ ಅವರ ನಾಲಿಗೆಯನ್ನು ಸುಡಬೇಕಾಗುತ್ತೆ ಎಂದು ವಿಜಯಪುರ ಸಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ ಕಾರಿದ್ದಾರೆ.

ಕಾಂಗ್ರೆಸಿಗರಿಗೆ ಬುದ್ಧಿಭ್ರಮಣೆ ಆದಂತಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು. ಹೇಳಿಕೆ ನೀಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಹೇಗೆ ಬೇಕಾದರೂ ಮಾತನಾಡಿದರೆ ನಡೆಯುತ್ತೆ ಎಂದು ಭಾವಿಸಿದ್ದರೆ ಅವರಿಗಿಂತ ಮೂರ್ಖ ಮತ್ತೊಬ್ಬರಿಲ್ಲದಂತೆ. ಜಯಚಂದ್ರಗೆ ಬುದ್ಧಿ ಸರಿಯಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ರಾಹುಲ್ ಗಾಂಧಿ ಕಾಂಗ್ರೆಸ್​ನ ಅಪ್ರಬುದ್ಧ ರಾಷ್ಟ್ರೀಯ ಅಧ್ಯಕ್ಷ. ಆತನೇ ಒಬ್ಬ ಅರೆಹುಚ್ಚ. ಇನ್ನು ಆತನ ಹಿಂಬಾಲಕರು ಹೇಗಿರಬಹುದು ಎಂಬುದು ಜಯಚಂದ್ರರಂತಹವರ ಹೇಳಿಕೆ ಗಮನಿಸಿದರೆ ಅರ್ಥವಾಗುತ್ತದೆ. ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಚೋರ್ ಅಂತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರಿಸಿ ಬಂದು ದೇಶದ ಪ್ರಧಾನಿಯಾಗಿ ಜಗತ್ತಿನ ಗೌರವಕ್ಕೆ ಪಾತ್ರರಾಗಿರುವ ಮೋದಿ ಬಗ್ಗೆ ಕೈ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರಿಗಿಂತ ಕೆಟ್ಟದ್ದಾಗಿ ಮಾತನಾಡಲು ನಮ್ಮಲ್ಲೂ ಸಾಕಷ್ಟು ಶಬ್ದ ಭಂಡಾರವಿದೆ ಎಂದರು.

ಟಿಪ್ಪು ಸುಲ್ತಾನ್ ಮನಸ್ಥಿತಿ ಹೊಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಶುರು ಮಾಡಿದ ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಕೂಡದು. ಮುಸ್ಲಿಂ ಮತಬ್ಯಾಂಕ್ ಮೇಲೆ ನಿಗಾ ಇಟ್ಟು ಟಿಪ್ಪು ಜಯಂತಿ ಆಚರಿಸುವ ಬದಲಿಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಥವಾ ಪಾಕಿಸ್ತಾನದ ವಿರುದ್ಧ ಹೋರಾಡಿದ್ದ, ಶೌರ್ಯಚಕ್ರ ಪುರಸ್ಕೃತ ಅಪ್ಪಟ ದೇಶಭಕ್ತ ಅಬ್ದುಲ್ ಹಮೀದ್ ಜಯಂತಿ ಆಚರಿಸಲಿ ಎಂದು ಸಲಹೆ ನೀಡಿದರು.

ಈ ಹಿಂದೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ಅಧಿಕಾರ ಕಳೆದುಕೊಂಡರು. ಆರೋಗ್ಯ ಸಮಸ್ಯೆ ನೆಪವೊಡ್ಡಿ ಟಿಪ್ಪು ಜಯಂತಿಯಿಂದ ಈಗ ಸಿಎಂ ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ಎಚ್ಡಿಕೆಗೆ ಎಳ್ಳಷ್ಟೂ ಇಷ್ಟವಿಲ್ಲ. ಆದ್ದರಿಂದಲೇ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೂ ಹೆಸರು ಹಾಕೋದು ಬೇಡ ಎಂದಿದ್ದಾರೆ. ಸಿಎಂ ಕುಮಾರಸ್ವಾಮಿ ಧೈರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಟಿಪ್ಪು ಹಿಂದು ವಿರೋಧಿಯಾಗಿದ್ದ, ಅನೇಕ ಹಿಂದು ಹಾಗೂ ಕೊಡವರ ಕಗ್ಗೊಲೆ ಮಾಡಿದ್ದಾನೆ ಎಂದು ಯತ್ನಾಳ್​ ಟಿಪ್ಪು ಜಯಂತಿ ವಿರುದ್ಧ ಹರಿಹಾಯ್ದರು.