ಬ್ಯಾರಿಕೇಡ್‌ನಲ್ಲಿ ಮಾಸಿದ ರಿಪ್ಲೆಕ್ಟರ್, ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನ

2 Min Read
ಬ್ಯಾರಿಕೇಡ್‌ನಲ್ಲಿ ಮಾಸಿದ ರಿಪ್ಲೆಕ್ಟರ್, ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನ

ಹರೀಶ್ ಮೋಟುಕಾನ ಮಂಗಳೂರು
ಕಮಿಷನರೆಟ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಗಳಲ್ಲಿ ರಾತ್ರಿ ವೇಳೆ ವೇಗವಾಗಿ ವಾಹನ ಚಲಾಯಿಸಿದರೆ ಅಪಾಯ ನಿಶ್ಚಿತ. ಏಕೆಂದರೆ ವೇಗ ನಿಯಂತ್ರಣಕ್ಕಾಗಿ ಅಳವಡಿಸಿರುವ ಬ್ಯಾರಿಕೇಡ್‌ಗಳಲ್ಲಿ ರಿಪ್ಲೆಕ್ಟರ್‌ಗಳು ಅಳಿಸಿ ಹೋಗಿರುವುದರಿಂದ ಹತ್ತಿರ ತಲುಪುವ ತನಕ ಚಾಲಕರ ಗಮನಕ್ಕೆ ಬರುವುದೇ ಇಲ್ಲ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿಯಿಂದ ಉಡುಪಿ ಗಡಿಭಾಗದ ತನಕ 30ಕ್ಕೂ ಅಧಿಕ ಕಡೆಗಳಲ್ಲಿ ಬ್ಯಾರಿಕೇಡ್‌ಗಳಿವೆ. ನಂತೂರು-ಮೂಡುಬಿದಿರೆ, ಪಂಪ್‌ವೆಲ್-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಹಲವಾರು ಕಡೆಗಳಲ್ಲಿ ವೇಗ ನಿಯಂತ್ರಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಘನ ವಾಹನಗಳಾದ ಲಾರಿ, ಬಸ್‌ಗಳು ಅವುಗಳನ್ನು ಅಡಿಗೆ ಹಾಕಿಕೊಂಡು ಮುಂದುವರಿಯುತ್ತವೆ. ಆದರೆ ದ್ವಿಚಕ್ರ ಸವಾರರು ಅಪಾಯ ಎದುರಿಸುತ್ತಿದ್ದಾರೆ. ಅದ್ದರಿಂದ ಅಪಾಯಕಾರಿ ಬ್ಯಾರಿಕೇಡ್‌ಗಳನ್ನು ತೆರವು ಮಾಡಿ ಹೊಸತು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಟ್ಟಾರ ಚೌಕಿಯ ಕೋಡಿಕಲ್ ಕ್ರಾಸ್‌ನಲ್ಲಿ ಶುಕ್ರವಾರ ರಾತ್ರಿ ಬ್ಯಾರಿಕೇಡ್ ಅಳವಡಿಸಿರುವುದು ಗಮನಕ್ಕೆ ಬಾರದೆ ದ್ವಿಚಕ್ರ ಸವಾರ ಅದಕ್ಕೆ ಡಿಕ್ಕಿ ಹೊಡೆದು ಬಿದ್ದು ಗಾಯಗೊಂಡಿದ್ದಾರೆ. ಕೂಳೂರು ಬಳಿ ಇರುವ ಬ್ಯಾರಿಕೇಡ್‌ನಲ್ಲೂ ರಿಪ್ಲೆಕ್ಟರ್‌ಗಳಿಲ್ಲದ ಕಾರಣ ವಾಹನಗಳು ಡಿಕ್ಕಿ ಹೊಡೆಯುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಬ್ಯಾರಿಕೇಡ್‌ಗಳು ನಗರದ ಅಲ್ಲಲ್ಲಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಹೆಚ್ಚು ಅಪಾಯ ಸಂಭವಿಸುತ್ತಿವೆ.

ಬ್ಯಾರಿಕೇಡ್‌ಗಳು ಹಳತಾಗಿದ್ದು, ಮಳೆಗಾಲದಲ್ಲಿ ಅದರ ಬಣ್ಣ ಮಾಸಿ ತುಕ್ಕು ಹಿಡಿದಿವೆ. ರಿಪ್ಲೆಕ್ಟರ್‌ಗಳ ಮೇಲೆ ಧೂಳು ನಿಂತು ವಾಹನಗಳ ಬೆಳಕು ಬಿದ್ದಾಗ ಪ್ರತಿಫಲಿಸುವುದಿಲ್ಲ. ಹೊಸ ಬ್ಯಾರಿಕೇಡ್‌ಗಳಿಗೆ ಅಳವಡಿಸಿದ ರಿಪ್ಲೆಕ್ಟರ್‌ಗಳು ಅರ್ಧ ಕಿ.ಮೀ. ದೂರಕ್ಕೆ ಕಾಣಿಸುತ್ತವೆ. ಹಳತಾದ ಕಾರಣ ಹತ್ತಿರ ತಲುಪುವ ತನಕ ಅರಿವಿಗೆ ಬರುವುದಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಅಪಾಯಕಾರಿ ಕೋಡಿಕಲ್ ಕ್ರಾಸ್: ಕೊಟ್ಟಾರದಿಂದ ಕೂಳೂರಿಗೆ ತೆರಳುವಾಗ ಮೇಲ್ಸೇತುವೆಯ ಹಾಗೂ ಸರ್ವಿಸ್ ರಸ್ತೆಯ ವಾಹನಗಳು ಒಂದೇ ಕಡೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಕೋಡಿಕಲ್ ಕ್ರಾಸ್ ಅಪಾಯಕಾರಿಯಾಗಿದೆ. ಕುಳೂರು ಕಡೆಯಿಂದ ಬಂದು ಕೋಡಿಕಲ್ ಕಡೆಗೆ ಹೋಗುವ ವಾಹನಗಳು ಇಲ್ಲಿ ಅಪಾಯದ ಸನ್ನಿವೇಶ ಎದುರಿಸಿ ಸಂಚರಿಸಬೇಕಾಗಿದೆ. ಮೇಲ್ಸೇತುವೆಯ ಅವೈಜ್ಞಾನಿಕ ನಿರ್ಮಾಣದಿಂದ ಈ ಸಮಸ್ಯೆ ಉಂಟಾಗಿದೆ. ಆಗಾಗ ಅಪಘಾತಗಳು, ವಾಹನ ದಟ್ಟಣೆ ಉಂಟಾಗುತ್ತಿರುತ್ತವೆ. ಸಂಚಾರಿ ಪೊಲೀಸರು ಕೆಲವೊಮ್ಮೆ ಮಾತ್ರ ಇರುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

See also  ಮಂಗಳೂರಲ್ಲಿ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆ ಸೆಕ್ಷನ್​ 144 ಜಾರಿ; ಡಿ.27ರ ತನಕ ಮದ್ಯ ಬ್ಯಾನ್​..!

ರಸ್ತೆಗಳಲ್ಲಿರುವ ರಿಪ್ಲೆಕ್ಟರ್ ಅಳಿಸಿ ಹೋದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ, ಹೊಸತು ಅಳವಡಿಸಬೇಕು. ಕೋಡಿಕಲ್ ಕ್ರಾಸ್ ಅಪಾಯಕಾರಿಯಾಗಿದ್ದು, ಅಲ್ಲಿ ಡಿವೈಡರ್ ಮುಚ್ಚಬೇಕು. ಸರ್ವಿಸ್ ರಸ್ತೆಯನ್ನು ಅಗಲಗೊಳಿಸಿ, ಮೇಲ್ಸೇತುವೆ ಸೇರುವಲ್ಲಿಂದ ಒಂದಷ್ಟು ಮುಂದಕ್ಕೆ ಕೊಂಡೊಯ್ದು ಅಲ್ಲಿ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಸೇರುವಂತೆ ಮಾಡಬೇಕು. ಆಗ ದೊಡ್ಡ ಮಟ್ಟದ ಅಪಾಯದಿಂದ ಪಾರಾಗಲು ಸಾಧ್ಯವಿದೆ.
– ಪಾಂಡುರಂಗ ಕುಕ್ಯಾನ್ ಕೋಡಿಕಲ್, ಸಾರ್ವಜನಿಕ

ಬ್ಯಾರಿಕೇಡ್‌ಗಳಲ್ಲಿ ರಿಪ್ಲೆಕ್ಟರ್ ಅಳಿಸಿ ಹೋಗಿದ್ದರೆ ಪರಿಶೀಲಿಸಿ ಹೊಸ ಬ್ಯಾರಿಕೇಡ್ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ವಿನಯ ಗಾಂವ್‌ಕರ್, ಡಿಸಿಪಿ, ಸಂಚಾರ ಮತ್ತು ಅಪರಾಧ ವಿಭಾಗ 

Share This Article