ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

 <ದಕ್ಷಿಣ ಭಾಗದ ಕಂದಕದಲ್ಲಿ ಮಳೆ ನೀರು ಮಳೆ ನೀರು ಸಂಗ್ರಹ * ಸಾಂಕ್ರಾಮಿಕ ರೋಗ ಭೀತಿ>

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ಉಡುಪಿ ಜಿಲ್ಲೆಯಲ್ಲಿರುವ ರಾಜವಂಶದವರ ಏಕೈಕ ಪಳೆಯುಳಿಕೆ ಬಾರಕೂರಿನ ಕೋಟೆ ನಾಮಾವಶೇಷವಾಗುವ ಅಪಾಯದಲ್ಲಿದೆ.

ಕಳೆದ ಜನವರಿಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಆಚರಿಸಿದ ಆಳುಪೋತ್ಸವ ಸರ್ಕಾರಿ ಕಾರ್ಯಕ್ರಮದ ಸಂದರ್ಭ ಕೋಟೆಯ ಕಂದಕಕ್ಕೆ ಅಡ್ಡವಾಗಿ ಜನ ಮತ್ತು ವಾಹನ ಸಂಚಾರಕ್ಕೆ ಮಾಡಲಾದ ಸಂಪರ್ಕ ರಸ್ತೆ ಈಗ ಅವಾಂತರಕ್ಕೆ ಕಾರಣವಾಗಿದೆ. ಕೋಟೆಯ ಪೂರ್ವ ಭಾಗದ ಮಾಸ್ತಿಬೈಲ್ ಮೊದಲಾದ ಭಾಗದಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ದಕ್ಷಿಣ ಭಾಗದ ಕಂದಕದಲ್ಲಿ ಸಂಗ್ರಹಗೊಳ್ಳುತ್ತಿದ್ದು, ಇದರಿಂದ ಮಣ್ಣಿನ ಕೋಟೆ ಕುಸಿಯುವ ಸಂಭವವಿದೆ.

ಕೋಟೆ ಒಳಭಾಗದಲ್ಲೂ ನೀರು ಸಂಗ್ರಹಗೊಂಡು ಹೊರಗೆ ಹರಿಯಲು ದಾರಿ ಇಲ್ಲದೆ ಪಶ್ಚಿಮ ಭಾಗದಲ್ಲಿರುವ ಚಿಕ್ಕ ದಾರಿ ಮೂಲಕ ಕಂದಕಕ್ಕೆ ಹೋಗುತ್ತಿದೆ. ಪೂರ್ವ ಭಾಗದಿಂದ ಬಂದ ನೀರು ಹಾಗೂ ಕೋಟೆ ಒಳಭಾಗದಲ್ಲಿರುವ ನೀರು ಒಟ್ಟಾಗಿ ಪಶ್ಚಿಮ ಭಾಗದಲ್ಲಿ ತುಂಬುತ್ತಿದೆ.

ಈ ಹಿಂದೆ ಕಂದಕದ ನೀರು ಕೋಟೆಯ ಉತ್ತರ ಭಾಗದಲ್ಲಿರುವ ಕೆರೆಗೆ ಹೋಗುತ್ತಿತ್ತು. ಆಳುಪೋತ್ಸವ ಆಚರಣೆ ಸಮಯದಲ್ಲಿ ಕೋಟೆಗೆ ಹೋಗಲು ಮಾಡಲಾದ ರಸ್ತೆಯಲ್ಲಿ ನೀರು ಹರಿದು ಹೋಗಲು ಚಿಕ್ಕ ಕೊಳವೆ ಅಳವಡಿಸಲಾಗಿತ್ತು. ಕೆಲವು ದಿನಗಳ ಮಳೆಗೆ ಈ ಕೊಳವೆ ಕುಸಿದು ಬಿದ್ದಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಿ ನೀರು ಕೋಟೆಯ ಸುತ್ತಲೂ ಹರಿಯದೆ ಶೇಖರಣೆಯಾಗಿದೆ.

ಆರೋಗ್ಯದ ಮೇಲೂ ದುಷ್ಪರಿಣಾಮ: ಕೋಟೆಯ ದಕ್ಷಿಣ ಭಾಗದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿದ್ದು, ಇಲ್ಲಿ ಶೇಖರಣೆಯಾದ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗ ಭೀತಿ ಕೂಡ ಇದೆ. ಕೋಟೆಯ ಪಶ್ಚಿಮ ಭಾಗದಲ್ಲಿ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಸುತ್ತಲೂ ಇರುವ ಮನೆ, ವಸತಿ ಗೃಹ, ವಾಣಿಜ್ಯ ಕೇಂದ್ರಗಳ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಲಿದೆ.

ಕೋಟೆಯ ಜಾಗ ಸಮತಟ್ಟು: ಪುರಾತತ್ವ ಇಲಾಖೆ ಅಧೀನದಲ್ಲಿ ಇರುವವರೆಗೆ ಕೋಟೆಯ ಯಾವುದೇ ಭಾಗದ ಕಲ್ಲು ಮಣ್ಣುಗಳನ್ನು ತೆಗೆಯುವಂತಿರಲಿಲ್ಲ. ಆದರೆ ಈಗ ಕೋಟೆಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಕೋಟೆಯ ಬಹುತೇಕ ಭಾಗವನ್ನು ಬೃಹತ್ ಯಂತ್ರಗಳಿಂದ ಸಮತಲಗೊಳಿಸಲಾಗಿದೆ. ಇದರಿಂದ ಕೋಟೆ ಮೇಲಾಗುತ್ತಿರುವ ಅಪಾಯ ತಪ್ಪಿಸಲು ಕೋಟೆಯಲ್ಲಿ ಮತ್ತು ಕಂದಕದಲ್ಲಿ ನೀರು ಶೇಖರಣೆಯಾಗುವುದನ್ನು ತಪ್ಪಿಸಿ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕಾರ‌್ಯಪ್ರವೃತ್ತವಾಗಬೇಕಿದೆ.

ಇಲ್ಲಿ ಅಪಾಯ ಸಂಭವಿಸಬಹುದೆಂದು ಆರಂಭದಲ್ಲೇ ಎಚ್ಚರಿಸಿದೆ. ಆದರೆ ಆ ಬಗ್ಗೆ ಯಾರೂ ಸ್ಪಂದಿಸಿಲ್ಲ. ಈಗ ಸಮಸ್ಯೆ ಕಂಡುಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು.
ಬಾರಕೂರು ಸತೀಶ್ ಪೂಜಾರಿ 
ಅಧ್ಯಕ್ಷರು, ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ

ಬಾರಕೂರು ಕೋಟೆಯನ್ನು ಮುಂದಿನ ತಲೆಮಾರಿಗೆ ಉಳಿಸುವ ಕಾರ‌್ಯವಾಗಬೇಕು. ಪ್ರವಾಸಿ ಕೇಂದ್ರ ಬಾರಕೂರಿನ ಕೋಟೆಯನ್ನು ಹಾಳಾಗದಂತೆ ಕಾಪಾಡಬೇಕು.
ರಘುಪತಿ ಬ್ರಹ್ಮಾವರ
ಉದ್ಯಮಿ