ಸಾಂತಾ ಕ್ಲಾಸ್​ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಒಬಾಮಾ: ವಿಡಿಯೋ ನೋಡಿ ಭಾವುಕರಾದ್ರು ನೆಟ್ಟಿಗರು

ವಾಷಿಂಗ್ಟನ್​: ಇನ್ನೇನು ಕ್ರಿಸ್​ಮಸ್​ ಬಂತು. ವಿಶೇಷ ಉಡಗೊರೆಗಳ ವಿನಿಮಯ, ಸಂಭ್ರಮ ಜಗತ್ತಿನಾದ್ಯಂತ ಈಗಾಗಲೇ ಶುರುವಾಗಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಬರಾಕ್​ ಒಬಾಮಾ ಅವರು ಸಾಂತಾ ಕ್ಲಾಸ್​ ಉಡುಗೆಯಲ್ಲಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು ಜನರ ಹೃದಯ ಗೆದ್ದಿದೆ.

ಬರಾಕ್​ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಈಗ ಕ್ರಿಸ್​ಮಸ್​ ನಿಮಿತ್ತ ಸಾಂತಾ ಕ್ಲಾಸ್​ನಂತೆ ಟೊಪ್ಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್​ ಡಿಸಿಯಲ್ಲಿರುವ ನ್ಯಾಷನಲ್​ ಮಕ್ಕಳ ಆಸ್ಪತ್ರೆಗೆ ತೆರಳಿದ್ದಾರೆ. ಕಾರಿಡಾರ್​ ಮೇಲೆ ಸಾಮಾನ್ಯ ವ್ಯಕ್ತಿಯಂತೆ ನಡೆದಾಡಿ, ಅಲ್ಲಿ ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿದ್ದಾರೆ. ಹಾಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಮಕ್ಕಳ ಕೇಕೆ, ಖುಷಿಯ ಕೂಗಾಟಗಳೂ ಜೋರಾಗಿತ್ತು. ಇದೆಲ್ಲ ಕ್ಷಣಗಳನ್ನೂ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಲಾಗಿದೆ.

ಈಗಾಗಲೇ ವಿಡಿಯೋವನ್ನು 2.9 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಒಬಾಮಾ ಅವರ ಕರುಣೆ ತುಂಬಿದ ಈ ಕೆಲಸಕ್ಕೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ. ಹಲವು ರೀತಿಯ ಪ್ರತಿಕ್ರಿಯೆಗಳನ್ನೂ ನೆಟ್ಟಿಗರು ನೀಡಿದ್ದಾರೆ.
ನ್ಯಾಷನಲ್​ ಆಸ್ಪತ್ರೆ ಕೂಡ ವಿಡಿಯೋವನ್ನು ಶೇರ್​ ಮಾಡಿದ್ದು, ಬರಾಕ್​ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮಲ್ಲಿನ ರೋಗಪೀಡಿತ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದೀರಿ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರಿಗೆ ಸದಾ ಸ್ಮರಣೀಯ. ನಿಮ್ಮ ಉಡುಗೊರೆಗಳಿಂದ ತುಂಬ ಸಂತೋಷ ಹೊಂದಿದ್ದಾರೆ ಎಂದು ಹೇಳಿದೆ.

ಇನ್ನು ಆಸ್ಪತ್ರೆಯಲ್ಲಿ ಮಾತನಾಡಿದ ಒಬಾಮಾ ಅವರು, ನನಗೆ ಇಲ್ಲಿನ ಮಕ್ಕಳು ಹಾಗೂ ಅವರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎರಡು ಹೆಣ್ಣು ಮಕ್ಕಳ ತಂದೆಯಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.