ಬಪ್ಪನಾಡು ದೇವಿಗೆ 40 ಸಾವಿರ ಚೆಂಡು ಮಲ್ಲಿಗೆ

<<ಸಹಸ್ರಾರು ಭಕ್ತರಿಂದ ಶಯನೋತ್ಸವಕ್ಕೆ ಹೂ ಸಮರ್ಪಣೆ>>

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವ ಪೂರ್ವಭಾವಿಯಾಗಿ ನಡೆಯುವ ಶ್ರೀದೇವಿಯ ಶಯನೋತ್ಸವಕ್ಕೆ ಈ ಬಾರಿ 10 ಸಾವಿರಕ್ಕೂ ಅಧಿಕ ಮಲ್ಲಿಗೆ ಅಟ್ಟೆ ಸಮರ್ಪಣೆಯಾಗಿವೆ.
ಮಂಗಳವಾರ ಹಗಲು ರಥೋತ್ಸವಕ್ಕೆ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿದ್ದು, ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸಾಯಂಕಾಲ ನಾಲ್ಕು ಗಂಟೆಯ ಬಳಿಕ ಶಯನೋತ್ಸವಕ್ಕಾಗಿ ದೇವಳದ ಪ್ರಾಂಗಣ ಹಾಗೂ ಹೊರ ಪ್ರಾಂಗಣದಲ್ಲಿ ಮಲ್ಲಿಗೆ ಸ್ವೀಕರಿಸಲಾಗಿದೆ.
ಬಪ್ಪನಾಡು ಕ್ಷೇತ್ರದ ಜಾತ್ರೆ ಮುನ್ನಾ ದಿನದಂದು ಬಲಿ ಉತ್ಸವ ಪೂಜೆ ಮುಗಿದ ಬಳಿಕ ದೇವಿಯ ಶಯನೋತ್ಸವ ಆಚರಿಸಲಾಗುತ್ತದೆ. ಭಕ್ತರು ಸಮರ್ಪಿಸಿದ ಎಲ್ಲ ಮಲ್ಲಿಗೆ ದಂಡೆಗಳನ್ನು ಕ್ಷೇತ್ರದ ಗರ್ಭ ಗುಡಿಯಲ್ಲಿರಿಸಿ ಬಳಿಕ ಕವಾಟ ಬಂಧನ ನಡೆಸಲಾಗುತ್ತದೆ. ಮುಂಜಾನೆ ವಿಶೇಷ ಪ್ರಾರ್ಥನೆಯೊಂದಿಗೆ ಗಂಟೆ ಬಾರಿಸಿ ಬಾಗಿಲು ತೆರೆಯಲಾಗುತ್ತದೆ. ಬಳಿಕ ದೇವಿಗೆ ಪೂಜೆ ಪುನಸ್ಕಾರಗಳು ನಡೆದು ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಬಪ್ಪನಾಡು ಶಯನೋತ್ಸವಕ್ಕಾಗಿ ಹೂ ಸಮರ್ಪಿಸಲು ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಭಕ್ತರು ಆಗಮಿಸಿ ಕೃತಾರ್ಥರಾಗುತ್ತಾರೆ. ಈ ಬಾರಿಯೂ ಸಹಸ್ರಾರು ಜನರು ಸರದಿ ಸಾಲಿನಲ್ಲಿ ನಿಂತು ಮಲ್ಲಿಗೆ ದಂಡೆ ಸಮರ್ಪಿಸಿದ್ದಾರೆ.