ಮೂಡುನಡುಗೋಡು ಗ್ರಾಮ ದತ್ತು ಸ್ವೀಕಾರ

ಸಂದೀಪ್ ಸಾಲ್ಯಾನ್ ಬಂಟ್ವಾಳ

ಮುಚ್ಚುವ ಹಂತದಲ್ಲಿದ್ದ ದಡ್ಡಲಕಾಡು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿದ್ದಲ್ಲದೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡೂವರೆ ಕೋಟಿ ರೂಪಾಯಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದ ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಮತ್ತೊಂದು ಕಾಂತ್ರಿಕಾರಿ ಯೋಜನೆಗೆ ಮುಂದಡಿ ಇಟ್ಟಿದೆ.

ದಡ್ಡಲಕಾಡು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ದೇಶದ ಗಮನ ಸೆಳೆದಿದ್ದ ಶ್ರೀದುರ್ಗಾ ಫ್ರೆಂಡ್ಸ್ ಗ್ರಾಮ ಪ್ರಕಲ್ಪ ಯೋಜನೆಯಡಿ ಮೂಡುನಡುಗೋಡು ಗ್ರಾಮವನ್ನು ದತ್ತು ಸ್ವೀಕರಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಾಗೂ ವಿವಿಧ ಸುಧಾರಣ ಕ್ರಮಗಳನ್ನು ಕೈಗೊಳ್ಳುವ ಕಾರ್ಯಕ್ಕೆ ರೂಪುರೇಷೆ ಸಿದ್ಧಪಡಿಸಿದೆ.

ಏನಿದು ಶ್ರೀದುರ್ಗಾ ಗ್ರಾಮ ಪ್ರಕಲ್ಪ: ದಡ್ಡಲಕಾಡು ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿಯಾದ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಕನಸಿನಂತೆ ಪಂಜಿಕಲ್ಲು ಗ್ರಾಪಂ ವ್ಯಾಪ್ತಿಗೊಳಪಡುವ ಮೂಡುನಡುಗೋಡು ಗ್ರಾಮವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ. ಕ್ಲಬ್ ಸದಸ್ಯರೆಲ್ಲರೂ ಈ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಒಂದು ವಾರ್ಡ್‌ನ್ನು ಮಾತ್ರ ಆಯ್ದುಕೊಂಡು ಅಲ್ಲಿಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲಿದೆ.

ಪಂಚತತ್ವಗಳು: ಶ್ರೀದುರ್ಗಾ ಗ್ರಾಮ ಪ್ರಕಲ್ಪ ಯೋಜನೆಯು ಐದು ಅಂಶಗಳ ಆಧಾರದಲ್ಲಿ ಮುನ್ನಡೆಯಲಿದೆ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಹಾಗೂ ಗ್ರಾಮೋನ್ನತಿ ಎನ್ನುವ ಐದು ವಿಷಯಗಳಲ್ಲಿ ಗ್ರಾಮ ಸುಧಾರಣ ಕೆಲಸಗಳು ಕಾರ್ಯಗತಗೊಳ್ಳಲಿದೆ. ವಾರ್ಡ್‌ನ ವಿದ್ಯಾವಂತ ಯುವಕರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಜತೆಗೆ ನೆರವು, ಬಡ ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆ, ಆರೋಗ್ಯ ಶಿಬಿರಗಳ ಮೂಲಕ ಗ್ರಾಮದ ಜನರ ಆರೋಗ್ಯ ಸುಧಾರಣೆ, ಸ್ವಚ್ಛತೆ ಕಾಯ್ದಿಕೊಳ್ಳಲು ಕಾರ್ಯಕ್ರಮ, ಸಂಘ ಸಂಸ್ಥೆಗಳು ಹಾಗೂ ಶ್ರಮದಾನ ಮೂಲಕ ರಸ್ತೆ, ಚರಂಡಿ ನಿರ್ಮಾಣ, ಹಡಿಲು ಗದ್ದೆಗಳಲ್ಲಿ ಕೃಷಿಗೆ ಪ್ರೋತ್ಸಾಹ, ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವುದು ಮೊದಲಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ರಾಜ್ಯಪಾಲರು ಪ್ರೇರಣೆ: ರಾಜ್ಯಾದ್ಯಂತ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುತ್ತಿರುವ ದುರ್ಗಾ ಫ್ರೆಂಡ್ಸ್ ಕ್ಲಬ್ ಗ್ರಾಮ ದತ್ತು ಸ್ವೀಕರಿಸಲು ಮುಂದಾಗಿರುವ ಈ ಚಿಂತನೆಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರೇ ಪ್ರೇರಣೆ. ದಡ್ಡಲಕಾಡು ಶಾಲೆ ಮೇಲಂತಸ್ತಿನ ಕಟ್ಟಡ ಲೋಕಾರ್ಪಣೆಗೆ ಅವರನ್ನು ಆಹ್ವಾನಿಸಲು ಬೆಂಗಳೂರಿನ ರಾಜಭವನಕ್ಕೆ ತೆರಳಿದ್ದ ವೇಳೆ ಕ್ಲಬ್ ಸಾಹಸಗಾಥೆಯನ್ನು ಆಲಿಸಿದ ರಾಜ್ಯಪಾಲರು ಶಾಲೆ ಮಾತ್ರವಲ್ಲ ಗ್ರಾಮವನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಬೇಕು, ಆ ಶಕ್ತಿ ದುರ್ಗಾ ಫ್ರೆಂಡ್ಸ್ ಕ್ಲಬ್‌ಗಿದೆ ಎನ್ನುವ ಸಲಹೆ ನೀಡಿದ್ದರು. ರಾಜ್ಯಪಾಲರ ಪ್ರೋತ್ಸಾಹದ ಮಾತನ್ನೇ ಸ್ಫೂರ್ತಿಯಾಗಿ ಪಡೆದುಕೊಂಡು ಕ್ಲಬ್‌ನ ಸದಸ್ಯರು ಈ ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗಿದ್ದಾರೆ.