ರೈ ಕೋಟೆ ಬಂಟ್ವಾಳದಲ್ಲಿ ಸೈ ಎನಿಸಿಕೊಳ್ಳುವುದೇ ಕಮಲ?

|ವೇಣುವಿನೋದ್ ಕೆ.ಎಸ್.

ಮಂಗಳೂರು: ಅರಣ್ಯ ಇಲಾಖೆ ಸಚಿವ ಬಿ.ರಮಾನಾಥ ರೈ ಪ್ರತಿನಿಧಿಸುತ್ತಿರುವ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ ಖಡಾಖಡಿಯ ಸ್ಪರ್ಧೆ ಸಾಧ್ಯತೆ ಇದೆ. ಅಲ್ಲದೆ, ‘ವೆಚ್ಚ ಸೂಕ್ಷ್ಮ ಕ್ಷೇತ್ರ’ವಾಗಿ ಗುರುತಿಸಿರುವ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ.

ಬೇಬಿಯಣ್ಣ ಎಂದೇ ಹೆಸರಾದ ರಮಾನಾಥ ರೈ ಇಲ್ಲಿ 7 ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಸೋತಿದ್ದಾರೆ. 1985ರಿಂದ ಗೆಲ್ಲುತ್ತ ಬಂದಿದ್ದ ರೈ, 2004ರಲ್ಲಿ ಬಿಜೆಪಿಯ ಬಿ.ನಾಗರಾಜ ಶೆಟ್ಟಿ ವಿರುದ್ಧ ಸೋತಿದ್ದರು. ಇದು ಬಿಟ್ಟರೆ ಮತ್ತೆಲ್ಲ ಗೆಲುವಿನ ಪರ್ವವೇ. 8ನೇ ಬಾರಿ ಹಣಾಹಣಿಗೆ ಸಿದ್ಧವಾಗಿರುವ ಇವರಿಗೆ ಪ್ರಸಕ್ತ ಬಾರಿ ಕಠಿಣ ಸವಾಲುಗಳಿವೆ.

ಈಗಾಗಲೇ ಪ್ರಚಾರಕ್ಕಿಳಿದಿರುವ ರೈ, ಕೆಲ ತಿಂಗಳ ಹಿಂದೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲದೆ, ಬಂಟ್ವಾಳದ ಮಿನಿ ವಿಧಾನಸೌಧ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಂತಹ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ ಕೊಡಿಸಿದ್ದರು. ಜತೆಗೆ ಜಿಲ್ಲೆಯ ಜನರಿಗೆ ಕೆಲವು ಕೆಲಸಗಳನ್ನು ಮಾಡಿಸಿಕೊಡುವ ಮೂಲಕ ಒಳ್ಳೆಯ ಹೆಸರನ್ನು ಇಟ್ಟುಕೊಂಡಿರುವುದಲ್ಲದೆ, ಕಾರ್ಯಕರ್ತರ ಜತೆಯೂ ಉತ್ತಮ ಸಂಬಂಧ ಹೊಂದಿದ್ದಾರೆ.

ಬಿಜೆಪಿಯಿಂದ ನಾಯ್್ಕ ರಮಾನಾಥ ರೈ ವಿರುದ್ಧ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ರಾಜೇಶ್ ನಾಯ್್ಕ ಉಳಿಪಾಡಿ ಅವರೇ ಈ ಬಾರಿಯ ಬಿಜೆಪಿ ಅಭ್ಯರ್ಥಿ. 2013ರಲ್ಲಿ ಹೊಸ ಅಭ್ಯರ್ಥಿಯಾಗಿದ್ದರಿಂದ ನನ್ನ ಪ್ರತಿಸ್ಪರ್ಧಿ ಕಲ್ಲಡ್ಕ ಪ್ರಭಾಕರ ಭಟ್ಟರೇ ಎಂದು ಹೇಳಿಕೊಂಡಿದ್ದ ರೈ ಗೆಲುವು ದಾಖಲಿಸಿದ್ದರು. ಆದರೆ, ಸೋಲಿನ ಬಳಿಕ ಸುಮ್ಮನೆ ಕುಳಿತುಕೊಳ್ಳದ ನಾಯ್್ಕ ಐದು ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತ ಬಂದಿದ್ದಾರೆ. ಅಲ್ಲದೆ, ಕೃಷಿ ಸಂಬಂಧಿ ಚಟುವಟಿಕೆಗೆ ನೆರವು ನೀಡುತ್ತ, ಕಳಂಕರಹಿತ, ಸಜ್ಜನ ವ್ಯಕ್ತಿ ಎಂದು ಕರೆಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸಾಂಪ್ರದಾಯಿಕ ಮತಗಳ ಜತೆ ಯುವಜನರ ಮತಗಳೂ ಲಭಿಸಲಿವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಜೆಡಿಎಸ್ ಪಾತ್ರ: ಬಂಟ್ವಾಳ ಸೇರಿ ಕರಾವಳಿಯ ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಇತರ ಪಕ್ಷಗಳು ಪ್ರಬಲವಾಗಿಲ್ಲ. ಜೆಡಿಎಸ್ ಪಡೆಯುವ ಮತಗಳು ಕಾಂಗ್ರೆಸ್ ಹಾಗೂ ಬಿಜೆಪಿಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಕಡಿಮೆ.

ಜಾತಿ ಲೆಕ್ಕಾಚಾರ

ಪ್ರಮುಖ ಅಭ್ಯರ್ಥಿಗಳಾದ ರಮಾನಾಥ ರೈ, ರಾಜೇಶ್ ನಾಯ್್ಕ ಬಂಟ ಸಮುದಾಯಕ್ಕೆ ಸೇರಿದವರು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಮುಸ್ಲಿಂ ಮತದಾರರು.

ಸಚಿವರಿಗೆ ಸವಾಲುಗಳೇನು?

ಬಂಟ್ವಾಳದ ವಿವಿಧೆಡೆ ಪದೇಪದೆ ನಡೆಯುವ ಕೋಮು ಸಂಘರ್ಷ, ಬೆಂಜನಪದವಿನಲ್ಲಿ ಎಸ್​ಡಿಪಿಐ ಕಾರ್ಯಕರ್ತ ಕಲಾಯಿ ಅಶ್ರಫ್ ಹತ್ಯೆ, ಬಳಿಕ ಬಂಟ್ವಾಳದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ, ಇದಲ್ಲದೆ ಕಲ್ಲಡ್ಕ ಶ್ರೀರಾಮ ಶಾಲೆ ಹಾಗೂ ಪುಣಚ ಶ್ರೀದೇವಿ ವಿದ್ಯಾಸಂಸ್ಥೆಗೆ ಕೊಲ್ಲೂರಿನ ದೇವಳದಿಂದ ಊಟಕ್ಕೆಂದು ಸಿಗುತ್ತಿದ್ದ ನೆರವು ಸ್ಥಗಿತಗೊಳಿಸಿರುವ ವಿಚಾರಗಳ ಬಗ್ಗೆ ಜನರಿಗೆ ಯಾವ ರೀತಿ ತಿಳಿವಳಿಕೆ ಮೂಡಿಸಲಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.

ಒಳಚರಂಡಿ ಸಮಸ್ಯೆ

ಬಂಟ್ವಾಳ ನಗರ ಸಹಿತ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ತ್ಯಾಜ್ಯ ನೀರು ನೇರ ನೇತ್ರಾವತಿ ನದಿಗೆ ಸೇರುವ ಕಾರಣ ನೀರು ಕಲುಷಿತವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆ ಇಲ್ಲ. ಕೃಷಿ ಕ್ಷೇತ್ರವೂ ಸಂಪೂರ್ಣ ನಿರ್ಲಕ್ಷ್ಯ್ಕೆ ಒಳಗಾಗಿದೆ. ಅಭಿವೃದ್ದಿ ಕಾರ್ಯಕ್ಕಿಂತಲೂ ಕೋಮು ಸಂಘರ್ಷ ಈ ಕ್ಷೇತ್ರದ ಪ್ರಮುಖ ಸವಾಲು.

ಬಂಟ್ವಾಳದ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ದ್ವೇಷ ರಾಜಕೀಯ ಪ್ರಹಸನಗಳೇ ಹೆಚ್ಚು. ಮಾತಿನಲ್ಲಿ ಶಾಂತಿ-ಸೌಹಾರ್ದತೆ ಸಾಕಾಗದು. ಅದರ ಪಾಲನೆ ಆತ್ಮಸಾಕ್ಷಿಯ ನಡೆಯಂತಿರಬೇಕು. ಮತದಾರರು ಪ್ರಜ್ಞಾವಂತರಾಗಿ ಹಕ್ಕು ಚಲಾಯಿಸಬೇಕು.

| ಮಾಧವ ವಿ.ಎಸ್ ಕಡೇಶಿವಾಲಯ, ಉಪನ್ಯಾಸಕ

 

 

 

Leave a Reply

Your email address will not be published. Required fields are marked *