ಕರ್ತವ್ಯ ಲೋಪವೆಸಗಿದ ಎಎಸ್‌ಐ ಅಮಾನತು

ಬಂಟ್ವಾಳ: ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ತೋರಿದ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಎಎಸ್‌ಐ ರಘುರಾಮ ಹೆಗ್ಡೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.
ಪಣಂಬೂರು ಠಾಣಾ ವ್ಯಾಪ್ತಿಯ ತೋಟಬೆಂಗ್ರೆಯಲ್ಲಿ ನ.18ರಂದು ಯುವತಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಬಗ್ಗೆ ದೂರು ದಾಖಲಿಸಲು ಆಕೆ ನ.20ರಂದು ಬಂಟ್ವಾಳ ನಗರ ಠಾಣೆಗೆ ಹೋಗಿದ್ದಳು. ಅಂದು ಹಗಲು ಠಾಣಾ ಕರ್ತವ್ಯದಲ್ಲಿದ್ದ ಎಎಸ್‌ಐ ರಘುರಾಮ ಹೆಗ್ಡೆ ತಕ್ಷಣ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಘಟನೆ ಎಲ್ಲಿ ನಡೆದಿದೆಯೋ ಅದೇ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿ ಸಂತ್ರಸ್ತೆಯನ್ನು ಹಿಂದಕ್ಕೆ ಕಳುಹಿಸಿದ್ದರು. ಕರ್ತವ್ಯ ನಿರ್ಲಕ್ಷೃ ಆರೋಪದಡಿ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದು, ವಿಚಾರಣೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.