ಮಳೆಹಾನಿ ಗ್ರಾಮಗಳಿಗೆ ಭೇಟಿ, ಪರಿಶೀಲನೆ


ಬನ್ನಿಕುಪ್ಪೆ: ಮಳೆ ಹಾನಿಗೆ ತುತ್ತಾದ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಸೋಮವಾರ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಪ್ಲಾಸ್ಟಿಕ್ ಬಕೆಟ್, ಬೆಡ್‌ಶೀಟ್‌ಗಳನ್ನು ನೀಡಿ ಸಾಂತ್ವನ ಹೇಳಿದರು.
ಬನ್ನಿಕುಪ್ಪೆಯ ರಸ್ತೆ ಬದಿಯಲ್ಲಿ ಮಲಗಿದ್ದ 85ರ ವಯೋಮಾನದ ಚನ್ನಾಜಮ್ಮ ಎಂಬುವರನ್ನು ಕಂಡು ಕುಟುಂಬದವರನ್ನು ಕರೆಸಿ ಅವರಿಗೆ ಮನೆಗೆ ಕರೆದುಕೊಂಡು ಉಪಚಾರ ಮಾಡಿ ಎಂದು ಸೂಚಿಸಿ, ಬೆಡ್‌ಶೀಟ್ ಹಾಗೂ ಉಡುಪುಗಳನ್ನು ನೀಡಿದರು.
ನಂತರ ಮಾತನಾಡಿದ ಅವರು, ಮಳೆಹಾನಿ ಮನೆಗಳ ಪಟ್ಟಿಗಳನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವಂತೆ ಸೂಚಿಸಿದರು.
ಬನ್ನಿಕುಪ್ಪೆ 40, ಹೊಸೂರು ಉಯಿಗೌಡನಹಳ್ಳಿಯಲ್ಲಿ 24, ದೊಡ್ಡೇಗೌಡನಕೊಪ್ಪಲು 4, ಮರಳಯ್ಯನಕೊಪ್ಪಲು 10, ಮೂಡಲಕೊಪ್ಪಲು 4, ಕುಪ್ಪೆ 1 ಹಾಗೂ ಕೊಳಗಟ್ಟ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ 3 ಮನೆಗಳನ್ನು ವೀಕ್ಷಿಸಿದರು.
ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿಕ್ಕಸುಜಾತಾ, ಅಭಿವೃದ್ಧಿ ಅಧಿಕಾರಿ ಜಿ.ಮಂಜುಳಾ, ಜಿಲ್ಲಾ ಕಾಂಗ್ರೆಸ್ ಯುವ ಘಟಕ ಮಾಜಿ ಅಧ್ಯಕ್ಷ ಕುಮಾರ್, ಗ್ರಾ.ಪಂ ಸದಸ್ಯ ಎಂ.ಎಸ್.ರಮೇಶ್, ಉದ್ದೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಸಿದ್ದನಾಯಕ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *