ಬ್ಯಾನರಲ್ಲೇ ರಾಜಕಾರಣಿಗಳ ಚುಚ್ಚಿದರು!

>

ಮಂಗಳೂರು: ನಗರ ಸಹಿತ ದ.ಕ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಕೆಲವು ಪರಿಸರ ಪ್ರೇಮಿಗಳು ಎತ್ತಿನಹೊಳೆ ವಿಚಾರದಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ಚುಚ್ಚುಮಾತುಗಳಿರುವ ಫಲಕ ಹಾಕಿದ್ದಾರೆ.
ಪ್ರಮುಖವಾಗಿ ಜಿಲ್ಲೆಯ ಶಾಸಕರಿಗೆ ಎಚ್ಚರಿಕೆ ನೀಡುವಂತಹ ವಾಕ್ಯಗಳಿರುವ ಬ್ಯಾನರ್‌ಗಳನ್ನು ನಗರದ ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಪ್ರದರ್ಶಿಸಲಾಗಿದೆ.
ಎಲ್ಲ ಶಾಸಕರ ಹೆಸರು, ಪೋಟೋ ಹಾಕಿ, ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷದ ಕಾರಿನಲ್ಲಿ ತಿರುಗಾಡಲು ಅಲ್ಲ. ಜಿಲ್ಲೆಯ ಜನರಿಗೆ ಈಗ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜೀನಾಮೆ ಕೊಟ್ಟು ಧರಣಿ ಕುಳಿತುಕೊಳ್ಳಿ ಎಂದು ಒಂದು ಬ್ಯಾನರ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಇನ್ನೊಂದು ಬ್ಯಾನರ್‌ನಲ್ಲಿ ಮುಖಂಡರಾದ ಡಾ.ಎಂ.ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಪೋಟೋ ಹಾಕಿ 13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗೆ ಜಿಲ್ಲೆಯ ಜೀವನದಿಯನ್ನು ಸರ್ವನಾಶ ಮಾಡಿ, ಜನರೀಗ ಟಾಯ್ಲೆಟ್, ಚರಂಡಿ ನೀರು ಶುದ್ಧೀಕರಿಸಿ ಕುಡಿಯುವಂತೆ ಮಾಡಿದ ಮೊಯ್ಲಿ ಹಾಗೂ ಡಿ.ವಿ.ಸದಾನಂದ ಗೌಡರಿಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯವಾಗಿ ಚುಚ್ಚಲಾಗಿದೆ.
ಅನಧಿಕೃತ ಫ್ಲೆಕ್ಸ್ ತೆರವು ಮಾಡದೆ ಈಗ ಹಾಕಿರುವ ಫ್ಲೆಕ್ಸ್‌ಗಳನ್ನು ತೆರವು ಮಾಡಿದರೆ ಜಾಗ್ರತೆ ಎಂದು ಮನಪಾ ಅಧಿಕಾರಿಗಳಿಗೂ ಇದೇ ಬ್ಯಾನರ್‌ನಲ್ಲೇ ಎಚ್ಚರಿಕೆ ಇದೆ.