ಕೊಲ್ಲೂರು ದೇವರ ಹುಂಡಿಯಲ್ಲಿ ಅಪಮೌಲ್ಯ ನೋಟು!

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟ್ ನಿಷೇಧ ಮಾಡಿ ಎರಡು ವರ್ಷ ಆಗುತ್ತಿದ್ದರೂ, ದೇವರ ಹುಂಡಿಗೆ ಕಾಣಿಕೆಯಾಗಿ ಬರುವ ನಿಷೇಧಿತ ನೋಟ್‌ಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ.

ದೇವಸ್ಥಾನದ ಹುಂಡಿಗಳಲ್ಲಿರುವ ಈ ಹಳೆಯ ನೋಟುಗಳ ವಿಲೇವಾರಿ ಹೇಗೆ ಎನ್ನುವ ಚಿಂತೆ ಒಂದೆಡೆಯಾದರೆ ಬೆಲೆ ಇಲ್ಲದ ನೋಟುಗಳನ್ನು ತಂದು ಹುಂಡಿಗೆ ಹಾಕುತ್ತಿರುವ ಭಕ್ತರ ಮನೋಭಾವವನ್ನು ಬದಲಾವಣೆ ಮಾಡುವುದು ಹೇಗೆ ಎಂಬ ಪ್ರಶ್ನೆಯೂ ದೇವಸ್ಥಾನದ ಆಡಳಿತವನ್ನು ಕಾಡುತ್ತಿದೆ.

ಹಳೇ ನೋಟು ಸಂಗ್ರಹದ ಬೆನ್ನು ಹತ್ತಿದ್ದ ಕೇಂದ್ರ ಸರ್ಕಾರ 10ಕ್ಕಿಂತ ಹೆಚ್ಚು ನಿಷೇಧಿತ ನೋಟು ಇಟ್ಟುಕೊಳ್ಳುವುದು ಅಪರಾಧ ಎಂದು ಹೇಳಿತ್ತು. ಅಚ್ಚರಿ ಎಂದರೆ ದೇವಸ್ಥಾನ ಹುಂಡಿಯಲ್ಲಿ ಅಮಾನ್ಯಗೊಂಡ ನೋಟುಗಳ ಕಂತೆ ಕಂತೆಯೇ ಸಿಗುತ್ತಿದೆ! ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭ ಬ್ಯಾನ್ ಮಾಡಿದ ನೋಟುಗಳ ಕಂತೆಯೇ ಪತ್ತೆಯಾಗಿದೆ. ನೋಟ್ ಬ್ಯಾನ್ ಮಾಡಿ ವರ್ಷ ಕಳೆದರೂ ಇನ್ನೂ ಜನರ ಬಳಿ ಹಳೇ ನೋಟು ಇದೆ. ಅದರಿಂದ ಮುಕ್ತರಾಗಲು ದೇವಸ್ಥಾನ ಹುಂಡಿ ಆಶ್ರಯಿಸುತ್ತಿರಬಹುದೇ ಎಂಬ ಸಂದೇಹವೂ ಕಾಡುತ್ತಿದೆ.

ದೇವಸ್ಥಾನ ಹುಂಡಿಯಲ್ಲಿ ಬೀಳುತ್ತಿರುವ ಹಳೇ ನೋಟು ವಿಲೇವಾರಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬೇಕು. ನೋಟು ಬ್ಯಾನ್ ಆಗಿ ವರ್ಷ ಕಳೆದಿದ್ದರೂ, ಭಕ್ತರು ಅಪಮೌಲ್ಯಗೊಂಡ ನೋಟನ್ನು ಹುಂಡಿಗೆ ಹಾಕುತ್ತಿರುವುದು ಅಚ್ಚರಿ. ಅಪಮೌಲ್ಯ ನೋಟುಗಳನ್ನು ದೇವರಿಗೆ ಕಾಣಿಕೆ ಹಾಕುವುದರಿಂದ ಪ್ರಯೋಜನವಿಲ್ಲ. ಹುಂಡಿಗೆ ಹಾಕಿದ ನಿಷೇಧಿತ ನೋಟುಗಳ ವಿಲೇವಾರಿಯೇ ಸಮಸ್ಯೆ.
|ಎಚ್.ಹಾಲಪ್ಪ, ಕಾರ್ಯನಿರ್ವಹಣಾಧಿಕಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಬೆಲೆ ಇಲ್ಲದ ನೋಟುಗಳನ್ನು ದೇವರ ಹುಂಡಿಗೆ ಹಾಕುವ ಮೊದಲು ಭಕ್ತರು ಆಲೋಚನೆ ಮಾಡಬೇಕು. ದೇವರಲ್ಲಿ ಭಕ್ತಿ ನಂಬಿಕೆಯಿಂದ ಎಲ್ಲೆಲ್ಲಿಂದಲೋ ಭಕ್ತರು ಬರುತ್ತಾರೆ. ದೇವಸ್ಥಾನಕ್ಕೆ ಬಂದು ಅಪಮೌಲ್ಯ ನೋಟು ಹುಂಡಿಗೆ ಹಾಕುವುದರಿಂದ ಅವರಿಗೇನು ಪುಣ್ಯ ಪ್ರಾಪ್ತಿಯಾಗುತ್ತದೆ?
|ವಂಡಬಳ್ಳಿ ಜಯರಾಮ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ, ಕೊಲ್ಲೂರು