ಹಫ್ತಾ ಬೆದರಿಕೆ: ಬನ್ನಂಜೆ ರಾಜನ ಐವರು ಸಹಚರರ ಸೆರೆ

ಉಡುಪಿ: ನಗರದ ಉದ್ಯಮಿಯೊಬ್ಬರಿಗೆ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿದ ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರನ್ನು ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೂಲ್ಕಿ ಕೊಳ್ನಾಡು ಕೆ.ಎಸ್ ರಾವ್ ನಗರ ನಿವಾಸಿಗಳಾದ, ಪ್ರಸ್ತುತ ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಿದ್ದ ಶಶಿ ಪೂಜಾರಿ ಯಾನೆ ಶಾಡೋ(28), ರವಿಚಂದ್ರ ಪೂಜಾರಿ ಯಾನೆ ವಿಕ್ಕಿ ಪೂಜಾರಿ(30), ಮಂಗಳೂರಿನ ಪೆರ್ಮಂಕಿ ಪಟ್ರಕೋಡಿ ಹೌಸ್ ನಿವಾಸಿ, ಪ್ರಸ್ತುತ ಕಟಪಾಡಿ ಏಣುಗುಡ್ಡೆಯಲ್ಲಿ ವಾಸಿಸುತ್ತಿರುವ ಧನರಾಜ್ ಪೂಜಾರಿ(26), ಮಲ್ಪೆ ಕೊಳ ನಿವಾಸಿ ಧನರಾಜ್ ಸಾಲ್ಯಾನ್(30), ಮಲ್ಪೆ ನಿವಾಸಿ ಉಲ್ಲಾಸ್ ಶೆಣೈ(27) ಬಂಧಿತರು.

ಆರೋಪಿಗಳು ಮಾ.13ರಂದು ಉದ್ಯಮಿ, ಉಪ್ಪೂರು ಕೆ.ಜಿ ರಸ್ತೆ ನಿವಾಸಿ ರತ್ನಾಕರ ಡಿ.ಶೆಟ್ಟಿ ಎಂಬುವರಿಗೆ ಕರೆ ಮಾಡಿ ಹಫ್ತಾ ನೀಡುವಂತೆ ಬೆದರಿಸಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಉಡುಪಿ ಡಿಸಿಐಬಿ(ಜಿಲ್ಲಾ ಅಪರಾಧ ತನಿಖಾ ದಳ) ತಂಡವನ್ನು ಜಾಗೃತಗೊಳಿಸಲಾಗಿತ್ತು. ಡಿಸಿಐಬಿ ಪೊಲೀಸ್ ನಿರೀಕ್ಷಕ ಸಿ.ಕಿರಣ್ ಅವರ ತಂಡ ಆರೋಪಿಗಳ ಬಗ್ಗೆ ತಾಂತ್ರಿಕ ಮಾಹಿತಿ ಸಂಗ್ರಹಿಸಿ, ಆರೋಪಿ ಶಶಿ ಪೂಜಾರಿಯ ಜಾಡು ಹಿಡಿದ ಬೆಂಗಳೂರಿಗೆ ತೆರಳಿದ್ದರು. ಮೂವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದು, ಇಬ್ಬರನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.
ಡಿಸಿಐಬಿ ಘಟಕ ಪೊಲೀಸ್ ನಿರೀಕ್ಷಕ ಸಿ.ಕಿರಣ್, ಎಎಸ್‌ಐ ರವಿಚಂದ್ರ, ಸಿಬ್ಬಂದಿ ಸುರೇಶ್, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಡಿಸಿಐಬಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಮೋಜು, ಮಸ್ತಿ ಏರಿಯದಲ್ಲೇ ಸೆರೆ: ಬೆಂಗಳೂರಿನ ಜೆ.ಪಿ ನಗರದಲ್ಲಿ ಶಶಿ ಪೂಜಾರಿ, ರವಿಚಂದ್ರ ಪೂಜಾರಿ ಹಾಗೂ ಧನರಾಜ್ ಪೂಜಾರಿ ಒಟ್ಟಿಗೆ ವಾಸವಿದ್ದರು. ಆರೋಪಿಗಳು ಮೋಜು, ಮಸ್ತಿ ಮಾಡುತ್ತಿದ್ದ ಎಂ.ಜಿ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿರುವ ಪಬ್‌ಗಳಲ್ಲಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಗುರುವಾರ ಬ್ರಿಗೇಡ್ ರಸ್ತೆಯ ಬಾರ್ ಒಂದರ ಬಳಿ ಮೂವರೂ ನಿಂತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಮಾಹಿತಿಯಂತೆ ಶುಕ್ರವಾರ ಬೆಳಗ್ಗೆ 7ಕ್ಕೆ ಮಲ್ಪೆಯಲ್ಲಿ ಧನರಾಜ್ ಸಾಲ್ಯಾನ್‌ನನ್ನು, ಸಾಯಂಕಾಲ 4ಕ್ಕೆ ಕೋರ್ಟ್ ರಸ್ತೆ ಸಮೀಪ ಉಲ್ಲಾಸ್ ಶೆಣೈಯನ್ನು ಬಂಧಿಸಲಾಗಿದೆ.

ಜೈಲಿನಲ್ಲಿರುವ ಬನ್ನಂಜೆ ರಾಜನ ಸೂಚನೆ!: ಬಂಧಿಸಲ್ಪಟ್ಟ ಎಲ್ಲ ಆರೋಪಿಗಳು ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರಾಗಿದ್ದಾರೆ. ಬನ್ನಂಜೆ ರಾಜ ಈಗಾಗಲೇ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದು, ಜೈಲಿನಲ್ಲಿದ್ದುಕೊಂಡೇ ತನ್ನ ಗ್ಯಾಂಗ್‌ನ್ನು ಕಂಟ್ರೋಲ್ ಮಾಡುತ್ತಿದ್ದಾನೆ. ಆತನ ಸೂಚನೆಯಂತೆ ಆರೋಪಿಗಳು ತಂಡ ರಚಿಸಿ ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ಬಿಲ್ಡರ್, ಉದ್ಯಮಿ, ವ್ಯಾಪಾರಸ್ಥರನ್ನು ಗುರಿಯಾಗಿಸಿ ಹಫ್ತಾಕ್ಕೆ ಬೇಡಿಕೆ ಒಡ್ಡುತ್ತಾರೆ. ಹಣ ನೀಡದೇ ಇದ್ದಲ್ಲಿ ಜೀವ ಬೆದರಿಕೆ ಹಾಕಿ, ಪ್ರಾಣ ಭೀತಿ ಸೃಷ್ಟಿಸುತ್ತಾರೆ. ಆರೋಪಿಗಳ ವಿರುದ್ಧ ಈಗಾಗಲೇ ದಕ್ಷಿಣ ಕನ್ನಡದ ಮಂಗಳೂರು ಉತ್ತರ(ಬಂದರ್), ಪೂರ್ವ(ಕದ್ರಿ), ಬರ್ಕೆ, ಉರ್ವ, ಉಳ್ಳಾಲ, ಉಡುಪಿಯ ಮಣಿಪಾಲ, ಮಲ್ಪೆ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಫ್ತಾ ಹಣ ನೀಡುವಂತೆ ಜೀವಬೆದರಿಕೆ ಕರೆ ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 0820-2526444 ಸಂಪರ್ಕಿಸಲು ಜಿಲ್ಲಾ ಪೊಲೀಸ್ ಮನವಿ ಮಾಡಿದೆ.