ಕೈಗಾರಿಕೋದ್ಯಮಕ್ಕೆ ಸಾಲ ನೀಡಲು ಬ್ಯಾಂಕ್‌ಗಳು ನಿರುತ್ಸಾಹ

<ಬ್ಯಾಂಕಿಂಗ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಅತೃಪ್ತಿ>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಜಿಲ್ಲೆಯ ಹಲವು ಬ್ಯಾಂಕ್‌ಗಳು ಆದ್ಯತಾ ವಲಯಗಳಾದ ಕೃಷಿ, ಮಧ್ಯಮ, ಸಣ್ಣ ಮತ್ತು ಅತಿಸಣ್ಣ ರಂಗದ (ಎಂಎಸ್‌ಎಂಇ) ಕೈಗಾರಿಕೋದ್ಯಮಕ್ಕೆ ಸಾಲ ನೀಡಲು ಉತ್ಸಾಹ ತೋರಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಗುರುವಾರ ಬ್ಯಾಂಕಿಂಗ್ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನೇಕ ಸಭೆಗಳಲ್ಲಿ ಜನರು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬ್ಯಾಂಕ್‌ನಿಂದ ಸಾಲ ಲಭಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ ಎಂದು ಪ್ರಸ್ತಾಪಿಸಿದ ಅವರು, ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡವೇ ಅತಿ ಹೆಚ್ಚು ನಗರೀಕರಣಗೊಂಡಿರುವ ಜಿಲ್ಲೆಯಾಗಿದ್ದು, ಉದ್ಯಮ ಅಭಿವೃದ್ಧಿಗೆ ಅವಕಾಶ ಇದೆ. ಆದರೆ ಈ ಬಗ್ಗೆ ಬ್ಯಾಂಕ್‌ಗಳು ಹೆಚ್ಚು ಯೋಚಿಸಿದಂತೆ ಕಾಣುತ್ತಿಲ್ಲ ಎಂದರು.

ಆದ್ಯತೇತರ ಕ್ಷೇತ್ರಗಳಿಗೆ ಮಹತ್ವ: ಸೆಪ್ಟೆಂಬರ್ ಅಂತ್ಯಕ್ಕೆ ಕೃಷಿ ವಲಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 2074 ಕೋಟಿ ರೂ. ಸಾಲ ನೀಡಿದ್ದು, ಶೇ.42ರಷ್ಟು ಮಾತ್ರ ಪ್ರಗತಿ ಆಗಿದೆ. ಎಂಎಸ್‌ಎಂಇ ಕ್ಷೇತ್ರಕ್ಕೆ 1325 ಕೋಟಿ ರೂ .ಮುಂಗಡ ನೀಡಲಾಗಿದ್ದು, ಶೇ.41ರಷ್ಟು ಪ್ರಗತಿ ಸಾಧಿಸಿದೆ. ಆದರೆ ಆದ್ಯತೇತರ ಕ್ಷೇತ್ರಗಳಲ್ಲಿ 5078.81 ಕೋಟಿ ರೂ. ಸಾಲ ನೀಡಿ, ಶೇ.125ರಷ್ಟು ಪ್ರಗತಿ ಸಾಧಿಸಿದ್ದು ಗಮನಿಸಿದರೆ ಬ್ಯಾಂಕ್‌ಗಳು ಇತರ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿದೆ ಎಂದು ಸಿಇಒ, ಲೀಡ್ ಬ್ಯಾಂಕ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ ಒಟ್ಟು 645 ಬ್ಯಾಂಕ್ ಶಾಖೆಗಳಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 43288.75 ಕೋಟಿ ರೂ. ಠೇವಣಿ ಇದೆ, ಶೇ.8.53ರಷ್ಟು ಪ್ರಗತಿಯಾಗಿದೆ, ಮುಂಗಡ ನೀಡಿಕೆ ಶೇ.19.5 ಪ್ರಗತಿಯೊಂದಿಗೆ 26550 ಕೋಟಿ ರೂ. ತಲಪಿದೆ. ಒಟ್ಟು ವಹಿವಾಟು ಶೇ.12.48 ಪ್ರಗತಿ ಸಹಿತ 70062.78 ಕೋಟಿ ರೂ. ಆಗಿದೆ.

ಸಿಂಡಿಕೇಟ್ ಬ್ಯಾಂಕ್ ವಲಯ ವ್ಯವಸ್ಥಾಪಕ ಸುಧಾಕರ ಕೊಥಾರಿ, ಆರ್‌ಬಿಐ ಎಜಿಎಂ ಪಿ.ಕೆ.ಪಟ್ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೊರ್ಜಿಯಾ ಹಾಜರಿದ್ದರು.

ಇಲ್ಲಿನ ಸಂಪನ್ಮೂಲ ಹೊರ ಜಿಲ್ಲೆಗೆ?: ಅನೇಕ ಪ್ರಮುಖ ಬ್ಯಾಂಕ್ ಸೇರಿದಂತೆ ಜಿಲ್ಲೆಯಲ್ಲಿನ ಬ್ಯಾಂಕ್‌ಗಳ ಸಿ.ಡಿ ಅನುಪಾತ (ಸಾಲ-ಠೇವಣಿ ಅನುಪಾತ) ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿತ ಶೇ.60ಕ್ಕಿಂತ ಕಡಿಮೆ ಇರುವುದು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಹಿಂದಿನ ಸಾಲಿಗೆ ಹೋಲಿಸಿದರೆ ಅನುಪಾತದಲ್ಲಿ ತುಸು ಏರಿಕೆಯಾಗಿದೆ, ಸರಾಸರಿ ಅನುಪಾತ ಶೇ.56.17ರಿಂದ 61.85 ತಲುಪಿದೆ, ಆದರೆ ಹಲವು ಪ್ರಮುಖ ಬ್ಯಾಂಕ್‌ಗಳ ಅನುಪಾತ ಶೇ.40ಕ್ಕೂ ಕಡಿಮೆ ಇರುವುದು ಸರಿಯಾದ ಸೂಚನೆಯಲ್ಲ, ಇಲ್ಲಿನ ಸಂಪನ್ಮೂಲಗಳು ಹೊರ ಜಿಲ್ಲೆಗೆ ಹೋಗುತ್ತಿರುವುದು ಇದರಿಂದ ವ್ಯಕ್ತವಾಗುತ್ತದೆ ಎಂದು ಸಿಇಒ ಸೆಲ್ವಮಣಿ ವಿಮರ್ಶಿಸಿದರು.

ಸಂಭಾವ್ಯ ಸಂಯೋಜಿತ ಸಾಲ ಯೋಜನೆ ಬಿಡುಗಡೆ, ಜಿಲ್ಲೆಯ 2019-20ರ ಸಂಭಾವ್ಯ ಸಂಯೋಜಿತ ಸಾಲ ಯೋಜನೆಯನ್ನು ನಬಾರ್ಡ್ ಸಿದ್ಧಪಡಿಸಿದ್ದು, ಸಿಇಒ ಡಾ.ಸೆಲ್ವಮಣಿ ಬಿಡುಗಡೆಗೊಳಿಸಿದರು. ಜಿಲ್ಲೆಯಲ್ಲಿ ಗ್ರಾಮೀಣ ಮೂಲಸೌಕರ್ಯಗಳ ಆಧಾರದಲ್ಲಿ ನಬಾರ್ಡ್ ಇದನ್ನು ಸಿದ್ಧಪಡಿಸಿದೆ. ಒಟ್ಟಾರೆ ಆದ್ಯತಾ ವಲಯದ 8 ಪ್ರಮುಖ ಕ್ಷೇತ್ರಗಳಡಿ 12,659.04 ಕೋಟಿ ರೂ.ನ ಸಾಲ ಯೋಜನೆ ಇದಾಗಿದ್ದು, ಈ ಬಗ್ಗೆ ನಬಾರ್ಡ್ ಎಜಿಎಂ ಎಸ್.ರಮೇಶ್ ವಿವರಣೆಯಿತ್ತರು.