ನಿತ್ಯವೂ ಬ್ಯಾಂಕ್​ನ 270 ಕೋಟಿ ರೂ. ಕಳವು

| ಗೋವಿಂದರಾಜ ಚಿನ್ನಕುರ್ಚಿ

ಬೆಂಗಳೂರು: ಯಾವ ಬ್ಯಾಂಕಿನಲ್ಲಿ ಯಾರು ಎಷ್ಟು ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಹಾರಿದ್ದಾರೆ ಎಂಬ ಲೆಕ್ಕಾಚಾರ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ದಿನಕ್ಕೆ ಸರಾಸರಿ 270 ಕೋಟಿ ರೂ. ಕಳ್ಳರ ಪಾಲಾಗುತ್ತಿದೆ!

2017-18ನೇ ಸಾಲಿನಲ್ಲಿ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಕನ್ನ ಕಳವು, ಡಕಾಯಿತಿ, ರಾಬರಿ ಮತ್ತು ಕಳವು ಮೂಲಕ ಬರೋಬ್ಬರಿ 97,244 ಕೋಟಿ ರೂ.ಗಳನ್ನು ಕಳ್ಳರು ದೋಚಿದ್ದಾರೆ. ಇಂತಹ ಆಘಾತಕಾರಿ ವಿಷಯ ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ವರದಿಯಲ್ಲಿ ಬಹಿರಂಗವಾಗಿದೆ.

ಬ್ಯಾಂಕ್ ಮತ್ತು ಎಟಿಎಂ ಸೇರಿ ಹಣ ದರೋಡೆ ಪ್ರಕರಣಗಳ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದೆ. ಅಲ್ಲಿ 1,473 ಕೋಟಿ ರೂ. ಗಳನ್ನು ದರೋಡೆಕೋರರು ದೋಚಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 1,051 ಕೋಟಿ ರೂ., ಉತ್ತರ ಪ್ರದೇಶದಲ್ಲಿ 852 ಕೋಟಿ ರೂ. ಕಳವಾಗಿದ್ದು, 2 ಮತ್ತು 3ನೇ ಸ್ಥಾನದಲ್ಲಿವೆ.

ಬ್ಯಾಂಕ್​ಗಳಿಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಗೆ ಬೆದರಿಸಿ ಡಕಾಯಿತಿ, ಎಟಿಎಂ ಬೂತ್​ಗೆ ತುಂಬಲು ಹಣ ಸರಬರಾಜು ಮಾಡುತ್ತಿದ್ದಾಗ ಅಡ್ಡಗಟ್ಟಿ ಸುಲಿಗೆಯಂತಹ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗಿವೆ. ಪಟ್ಟಣ, ಗ್ರಾಮೀಣ ಭಾಗದಲ್ಲಿ ಮತ್ತು ನಿರ್ಜನ ಪ್ರದೇಶದಲ್ಲಿರುವ ಬ್ಯಾಂಕ್​ಗಳಿಗೆ ರಾತ್ರಿ ವೇಳೆ ಕನ್ನ ಕೊರೆದು ಗ್ರಾಹಕರ ಹಣ ದೋಚುತ್ತಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರಪ್ರದೇಶಗಳಲ್ಲಿ ಇಂಥ ಪ್ರಕರಣಗಳನ್ನು ಹೆಚ್ಚಾಗಿ ಕಾಣಬಹುದಾಗಿವೆ.

ದಕ್ಷಿಣ ಭಾರತದಲ್ಲಿ ಕರ್ನಾಟಕವೇ ನಂ.1: ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬ್ಯಾಂಕ್, ಎಟಿಎಂ ಹಣ ಕಳವು ಸಂಬಂಧ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 2017-18ನೇ ಸಾಲಿನಲ್ಲಿ ಕರ್ನಾಟಕದಲ್ಲಿ 299 ಕೋಟಿ ರೂ. ಕಳುವಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (200), ತೆಲಂಗಾಣ (190), ಕೇರಳ (60.13), ಆಂಧ್ರಪ್ರದೇಶ(50.22 ಕೋಟಿ) ಮತ್ತು ಪುದುಚೇರಿ (10) ರಾಜ್ಯಗಳಿವೆ. ಬ್ಯಾಂಕ್ ಅಥವಾ ಎಟಿಎಂಗೆ ತುಂಬಬೇಕಿದ್ದ ಹಣವನ್ನು ಭದ್ರತಾ ಸಿಬ್ಬಂದಿಯೇ ದೋಚಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ ಎಂದು ಆರ್​ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆಗೆ ರಿಸರ್ವ್ ಬ್ಯಾಂಕ್ ಸೂಚನೆ

ಪ್ರತಿದಿನ ನೂರಾರು ಕೋಟಿ ರೂ. ವ್ಯವಹಾರ ನಡೆಸುವ ಬ್ಯಾಂಕ್ ಮತ್ತು ಎಟಿಎಂ ಘಟಕಗಳಿಗೆ 24 ಗಂಟೆ ಕಾರ್ಯನಿರ್ವಹಿಸುವ ಸಿಸಿ ಕ್ಯಾಮರಾ ಅಳವಡಿಸಬೇಕು. ತರಬೇತಿ ಹೊಂದಿರುವ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಬೇಕು. ಒಂದೆಡೆಯಿಂದ ಮತ್ತೊಂದೆಡೆ ಹಣ ಸಾಗಿಸುವಾಗ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಜತೆಗಿರಬೇಕು. ಎಟಿಎಂ ಯಂತ್ರಗಳ ಸಾಫ್ಟ್​ವೇರ್ ಉನ್ನತೀಕರಿಸುವಂತೆ ಜೂನ್​ನಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಟೈಮ್ೈನ್ ನಿಗದಿಪಡಿಸಲಾಗಿದೆ. ಕಾಲಕಾಲಕ್ಕೆ ಬ್ಯಾಂಕ್​ನ ಮತ್ತು ಎಟಿಎಂ ಯಂತ್ರದ ತಂತ್ರಜ್ಞಾನ ಬದಲಾಯಿಸುವಂತೆ ಆರ್​ಬಿಐ ಸೂಚಿಸಿದೆ.

900 ಡೆಬಿಟ್ ಕಾರ್ಡ್​ನಲ್ಲಿ ಕಳ್ಳತನ

ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಎಟಿಎಂಗಳಲ್ಲಿ 1 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಈ ಪ್ರಕಾರ 9 ಕೋಟಿ ರೂ.ಗೂ ಅಧಿಕ ನಗದು ಕಳವಾಗಿದೆ. 1 ಲಕ್ಷ ರೂ.ಗೂ ಕಡಿಮೆ ಮೊತ್ತ ಕಳವಾಗಿರುವ ಪ್ರಕರಣಗಳು ಸಾವಿರದ ಗಡಿ ದಾಟಿದೆ. ಹೀಗಾಗಿ ಕಾಲಕಾಲಕ್ಕೆ ಡೆಬಿಟ್ ಕಾರ್ಡ್ ಗಳ ಬದಲಾವಣೆ ಮತ್ತು ಎಟಿಎಂ ಯಂತ್ರಗಳ ತಂತ್ರಜ್ಞಾನಗಳನ್ನು ಮೇಲ್ದರ್ಜೆಗೆ ಸೇರಿಸುವಂತೆ ಆರ್​ಬಿಐ ಎಲ್ಲ ಬ್ಯಾಂಕುಗಳಿಗೆ ಸೂಚಿಸಿದೆ.

ಅಪರಾಧಿಗಳ ಕಳ್ಳ ಮಾರ್ಗ

ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಡಕಾಯಿತಿ, ರಾಬರಿ, ಕನ್ನ ಕಳವು ಮತ್ತು ಕಳ್ಳತನದ ಮೂಲಕ ಆರೋಪಿಗಳು ಹಣವನ್ನು ದೋಚುತ್ತಿದ್ದಾರೆ. ಬ್ಯಾಂಕ್ ಕಚೇರಿಯಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ನಗದು ಕಳ್ಳತನ ಮಾಡುವುದು, ರಾತ್ರಿ ವೇಳೆ ಬ್ಯಾಂಕ್ ಕಟ್ಟಡ ಕೊರೆದು ಕನ್ನ ಹಾಕುವುದು, ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣವನ್ನು ಭದ್ರತಾ ಸಿಬ್ಬಂದಿ ಅಥವಾ ದರೋಡೆಕೋರರು ದೋಚುವುದು ಹಾಗೂ ಮಾರಕಾಸ್ತ್ರಗಳೊಂದಿಗೆ ಬ್ಯಾಂಕಿಗೆ ನುಗ್ಗಿ ಸಿಬ್ಬಂದಿಗೆ ಬೆದರಿಸಿ ಡಕಾಯಿತಿ ಮಾಡುತ್ತಿರುವುದು ವರದಿಯಾಗಿವೆ.