ನಸುಕಿನಲ್ಲೇ ಬ್ಯಾಂಕ್ ಎದುರು ರೈತರ ಸಾಲು

ಸೊರಬ: ಸಾಲಮನ್ನಾ ಯೋಜನೆಗೆ ದಾಖಲೆಗಳನ್ನು ನೀಡಲು ರೈತರು ಸ್ಥಳೀಯ ಕೆನರಾ ಬ್ಯಾಂಕ್ ಶಾಖೆ ಎದುದು ಸೋಮವಾರ ನಸುಕಿನಲ್ಲೇ ಆಗಮಿಸಿ ಸಾಲುಗಟ್ಟಿ ನಿಂತಿದ್ದರು.

ಬ್ಯಾಂಕ್ ನೌಕರರ ಮುಷ್ಕರ ಹಾಗೂ ರಜಾ ದಿನ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನ ನಿರಂತರ ರಜೆ ಇದ್ದ ಕಾರಣ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬ್ಯಾಂಕ್​ಗೆ ಆಗಮಿಸಿದ್ದರು. ತಡವಾದರೆ ದಾಖಲೆ ನೀಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಆಧಾರ್ ಕಾರ್ಡ್, ಪಡಿತರ ಚೀಟಿ. ಜಾತಿ ಪ್ರಮಾಣ ಪತ್ರ, ಮೊಬೈಲ್ ನಂಬರ್, ಪಾನ್​ಕಾರ್ಡ್, ಭೂದಾಖಲೆಗಳೊಂದಿಗೆ ಮುಂಜಾನೆ 5 ಗಂಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದರು.

ರಸ್ತೆಯಿಂದ ಬ್ಯಾಂಕ್​ನ ಮೇಲ್ಮಹಡಿವರೆಗೂ ರೈತರು ನಾಮುಂದೆ, ತಾಮುಂದೆ ಎಂಬಂತೆ ಸಾಲಿನಲ್ಲಿ ನಿಂತಿದ್ದರು. ಇವರನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ದಿನಕ್ಕೆ 70 ರೈತರ ದಾಖಲೆ ಪರಿಶೀಲನೆ ಮಾಡುತ್ತಿದ್ದ ಕಾರಣ ಹಲವು ರೈತರು ಅವಕಾಶ ಸಿಗದೆ ಹಿಂದಿರುಗಬೇಕಾಯಿತು.

ಸರ್ಕಾರ ಸಾಲಮನ್ನಾಕ್ಕೆ ಈ ರೀತಿ ದಾಖಲೆಗಳನ್ನು ನೀಡುವಂತೆ ಆದೇಶಿಸಿರುವುದು ಸರಿಯಲ್ಲ. ಸಾಲ ಪಡೆಯುವಾಗಲೇ ನಾವು ಎಲ್ಲ ದಾಖಲೆಗಳನ್ನು ನೀಡಿರುತ್ತೇವೆ. ದೂರದ ಊರುಗಳಿಂದ ನಸುಕಿನಲ್ಲೇ ಬಂದು ನಿಂತಿದ್ದೇವೆ. ಊಟ, ತಿಂಡಿಗೆ ಹೋಗಲೂ ಆಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.