ತಾತ್ಕಾಲಿಕ ಸೇತುವೆ ನಿರ್ಮಿಸಿದ ಬಾಂಜಾರುಮಲೆ ನಿವಾಸಿಗಳು!

 ವೇಣುವಿನೋದ್.ಕೆ.ಎಸ್/ಶ್ರವಣ್ ಕುಮಾರ್ ನಾಳ ಚಾರ್ಮಾಡಿ
53 ವರ್ಷ ಹಿಂದಿನ ಸೇತುವೆ ಕೊಚ್ಚಿ ಹೋಗಿ ಸಂಪರ್ಕವನ್ನೇ ಕಡಿದುಕೊಂಡಿದ್ದರು ಆ ಜನ. ಆಹಾರ, ಆಸ್ಪತ್ರೆಗೆ ಹೊರ ಜಿಲ್ಲೆಯ ಸಂಪರ್ಕ ಅನಿವಾರ್ಯ! ಅದಕ್ಕಾಗಿ ಜಿಲ್ಲಾಡಳಿತದಿಂದ ನೆರವು ನಿರೀಕ್ಷಿಸುತ್ತಾ ಕಾಯುವ ಬದಲು ತಾವೇ ತಾತ್ಕಾಲಿಕ ಸೇತುವೆ ನಿರ್ಮಿಸಿದರು.

– ಇದು ಬಾಂಜಾರಮಲೆಯ ಸ್ವಾಭಿಮಾನಿ ಮಲೆಕುಡಿಯ ಜನಾಂಗದವರ ಯಶೋಗಾಥೆ….
ತಮ್ಮ ಊರನ್ನು ಪ್ರತ್ಯೇಕಿಸುವ ಅಬ್ಬರದ ಅಣಿಯೂರು ಹೊಳೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ಮೂರೇ ಗಂಟೆಯಲ್ಲಿ ಮರಗಳನ್ನೇ ಸೇರಿಸಿ ಕಾಲು ಸಂಕ ನಿರ್ಮಿಸಿ ತಮ್ಮ ಅವಶ್ಯಕತೆ ಪೂರೈಸಿಕೊಳ್ಳುವ ಮಟ್ಟಿಗೆ ಚಾತುರ್ಯ ಪ್ರದರ್ಶಿಸಿದ್ದಾರೆ! ಮಹಿಳೆಯರು, ವೃದ್ಧರು, ಮಕ್ಕಳು, ಯುವಕರು ಸೇರಿಕೊಂಡು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡಿದ್ದಾರೆ.

ಚಾರ್ಮಾಡಿ ಘಾಟಿಯ ಬದಿಯಲ್ಲೇ 8 ಕಿ.ಮೀ ಕಾಡಿನೊಳಗೆ ಎಸ್ಟೇಟೊಂದರ ಬದಿಯಲ್ಲಿರುವ ಮಲೆಕುಡಿಯರ ಕಾಲೊನಿಯೇ ಬಾಂಜಾರಮಲೆ. ಬಾಂಜಾರಮಲೆ ಎನ್ನುವ ಗುಡ್ಡ-ಕಾಡಿನಲ್ಲಿ 45 ಮನೆಗಳಿವೆ, 110 ಮಂದಿ ವಾಸಿಸುತ್ತಿದ್ದಾರೆ. ಕಳೆದ ವಾರ ಸುರಿದ ಭಾರಿ ಮಳೆಗೆ ಇಲ್ಲಿನ 53 ವರ್ಷ ಹಳೇ ಸೇತುವೆ ಕೊಚ್ಚಿ ಹೋಯಿತು. ಮೇಲ್ಭಾಗದಿಂದ ಹೊಳೆಯಲ್ಲಿ ಬೃಹತ್ ಪ್ರವಾಹದೊಂದಿಗೆ ಬಂದ ಬೃಹತ್ ಕಲ್ಲು, ಮರಗಳು ಬಡಿದು ಸೇತುವೆಯ ಬೀಮ್‌ಗಳು ಎಲ್ಲೋ ಹೋಗಿ ಬಿದ್ದಿವೆ. ಇದರಿಂದಾಗಿ ಈ ಊರಿನ ಸಂಪರ್ಕವೇ ತುಂಡು!

ನೆರವೇರಲಿಲ್ಲ ಡಿಸಿ ಭರವಸೆ
ಸೇತುವೆ ಕುಸಿದ ಮರುದಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸ್ಥಳಕ್ಕೆ ಭೇಟಿಯಿತ್ತಿದ್ದರು. ಮುರಿದು ಹೋದ ಸೇತುವೆ ಇನ್ನೊಂದು ಬದಿಯಲ್ಲಿ ನಿಂತು, ತಮ್ಮ ಊರಿನ ಕಡೆಗೆ ನಿಂತಿದ್ದ ಮಲೆಕುಡಿಯರಲ್ಲಿ ಮೆಗಾಫೋನ್‌ನಲ್ಲಿ ಮಾತನಾಡಿ, ಮೂರು ದಿನದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸುವ ಆಶ್ವಾಸನೆ ನೀಡಿ ತೆರಳಿದ್ದರು. ಆದರೆ ನಾಲ್ಕು ದಿನವಾದರೂ ಯಾರೂ ಅತ್ತ ಕಡೆಗೆ ಹೋಗಿಲ್ಲ. ಹಾಗಾಗಿ ಸಮೀಪದ ಎಸ್ಟೇಟ್‌ನವರಲ್ಲಿ ಸಹಾಯ ಕೇಳಿದ ಮಲೆಕುಡಿಯರು ಬುಧವಾರ ಬೆಳಗ್ಗೆ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಿದ್ದಿರುವ ಗಟ್ಟಿಯಾದ ಮರಗಳನ್ನು ಸೇರಿಸಿ ಇನ್ನೊಂದು ಬದಿಗೆ ತಲಪಿಸಿ, ಬೆತ್ತದಲ್ಲಿ ಕಟ್ಟಿ ಗಟ್ಟಿ ಸೇತುವೆ ನಿರ್ಮಿಸಿದ್ದಾರೆ.

ವಿಜಯವಾಣಿ-ದಿಗ್ವಿಜಯ ತಂಡ ಸಹಾಯಹಸ್ತ
ತಾತ್ಕಾಲಿಕ ಸೇತುವೆ ನಿರ್ಮಾಣದಲ್ಲಿ ಬಾಂಜಾರಮಲೆಯ ಮಲೆಕುಡಿಯರಿಗೆ ನೆರವಾಗಿದ್ದು ವಿಜಯವಾಣಿ-ದಿಗ್ವಿಜಯ ತಂಡ. ಮರವನ್ನು ನೀರಿಗೆ ಇಳಿಸಿ ಒಂದು ಬದಿಯನ್ನು ಸೇತುವೆಯ ಒಂದು ಬದಿಗೆ ಇರಿಸಿ, ಇನ್ನೊಂದು ತುದಿಯನ್ನು ವಿರುದ್ಧ ದಿಕ್ಕಿನ ಸೇತುವೆಯ ಬದಿಗೆ ಇರಿಸಲಾರದೆ ಮಲೆಕುಡಿಯರು ಸಮಸ್ಯೆಯಲ್ಲಿದ್ದರು. ಸಮೀಪದ ಎಸ್ಟೇಟ್ ಮಂದಿ ಬರುವುದಾಗಿ ಹೇಳಿದ್ದರೂ, ಬರಲಿಲ್ಲ. ಅದೇ ವೇಳೆಗೆ ವರದಿಗಾರಿಕೆಗೆಂದು ಸ್ಥಳಕ್ಕೆ ವಿಜಯವಾಣಿ-ದಿಗ್ವಿಜಯ ತಂಡ ತಲುಪಿತ್ತು.

ಕೆಳಗೆ ನೀರಿನಲ್ಲಿದ್ದ ಮರದ ತುದಿಗೆ ಅಲ್ಲಿದ್ದ ವೈರನ್ನೇ ಕಟ್ಟಿ ಮೇಲಕ್ಕೆ ಕಷ್ಟಪಟ್ಟು ಎಳೆಯಲಾಯಿತು. ಮರದ ತುಂಡನ್ನು ಮೇಲೆತ್ತಿ ಸರಿಯಾಗಿ ಇರಿಸಲಾಯಿತು. ಆ ಬಳಿಕ ಇನ್ನೆರಡು ಮರಗಳನ್ನು ಹಗ್ಗ ಕಟ್ಟಿ ಎಳೆದರೆ ಇನ್ನೊಂದು ಬದಿಯಲ್ಲಿದ್ದ ಮಲೆಕುಡಿಯರ ತಂಡದವರೂ ಸೇರಿಕೊಂಡು ಸಮಾಂತರವಾಗಿ ಇರಿಸಿದರು. ಬಳಿಕ ಅವುಗಳಿಗೆ ಅಡ್ಡಲಾಗಿ ತುಂಡುಗಳನ್ನು ಇರಿಸಿ ಬೆತ್ತವನ್ನೂ ಕಟ್ಟಲಾಯಿತು. ಎರಡು ಬದಿಗಳಲ್ಲಿಯೂ ರಾಡ್‌ಗಳನ್ನು ಕಟ್ಟಿ, ಅದಕ್ಕೆ ಉದ್ದವಾದ ಬೆತ್ತ ಬಗಿದು ಕೈಯಲ್ಲಿ ಆಧಾರವಾಗಿ ಹಿಡಿಯಲು ವ್ಯವಸ್ಥೆ…ಆ ಮೂಲಕ ಸರಾಗವಾಗಿ ನಡೆದುಹೋಗಬಲ್ಲ ಕಾಲು ಸಂಕ ರೆಡಿ!

ಶೀಘ್ರ ಶಾಶ್ವತ ಸೇತುವೆಗೆ ಬೇಡಿಕೆ
ಬಾಂಜರಮಲೆಯ 16 ಮಕ್ಕಳು ಶಾಲೆಗಳಿಗೆ ತೆರಳಲಿ ಇರುವುದು ಇದೊಂದೇ ಮಾರ್ಗ. ಸೇತುವೆ ಕುಸಿದ ಕಾರಣ ಎಲ್ಲರೂ ಮನೆಯಲ್ಲಿದ್ದಾರೆ. ಈ ಮಕ್ಕಳನ್ನು ಮೊದಲು ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈಗ ವಾಹನವೂ ಹೋಗುತ್ತಿಲ್ಲ. ಇನ್ನು ಸೇತುವೆ ನಿರ್ಮಾಣ ಆಗುವವರೆಗೂ ಇದೇ ಸ್ಥಿತಿ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಜಿಲ್ಲಾಡಳಿತ ಆದಷ್ಟು ಬೇಗನೆ ನಮಗೆ ಶಾಶ್ವತ ಸೇತುವೆ ನಿರ್ಮಿಸಿಕೊಡಲಿ ಎನ್ನುವುದು ಇಲ್ಲಿನ ನಿವಾಸಿಗಳ ಒಕ್ಕೊರಲಿನ ಒತ್ತಾಯ.

ನಕ್ಸಲ್ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ರಮದಡಿ ಮಲೆಕುಡಿಯರಿಗೆ ಅಕ್ಕಿ ಹಾಗೂ ಬೇಳೆಕಾಳುಗಳನ್ನು ಮೊಬೈಲ್ ರೇಶನ್ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ನೀಡಿಲ್ಲ. ನೀಡಿದ್ದರೆ ನೆರವಾಗುತ್ತಿತ್ತು.
-ಅಶೋಕ್, ಬಾಂಜಾರುಮಲೆ ನಿವಾಸಿ

ಅನಾರೋಗ್ಯದವರಿಗೆ, ಮಕ್ಕಳಿಗೆ ಕಷ್ಟವಾಗುತ್ತದೆ. ನಮಗೆ ಸಂಪರ್ಕದ್ದೇ ಸಮಸ್ಯೆ. ಆದಷ್ಟು ಬೇಗ ನಮಗೆ ಸೇತುವೆ ನಿರ್ಮಿಸಿ ಕೊಡಬೇಕು. ಈ ಸೇತುವೆಯಿಂದ ಮೇಲ್ಭಾಗ ನಿರ್ಮಿಸಿರುವ ಹೊಸ ಕಾಂಕ್ರೀಟ್ ರಸ್ತೆಯ ಮೇಲೆ ಅಲ್ಲಲ್ಲಿ ಕುಸಿದ ಮಣ್ಣನ್ನು ತೆರವುಗೊಳಿಸಬೇಕು.
ಸುಜಿತ್, ಬಾಂಜಾರುಮಲೆ ನಿವಾಸಿ

 

                                                                                                           ಚಿತ್ರ: ಅಪುಲ್ ಇರಾ

Leave a Reply

Your email address will not be published. Required fields are marked *