ಮೊದಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಅವಳಿ ಮಕ್ಕಳನ್ನು ಹೆತ್ತ ಮಹಿಳೆ!

ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬಳು ಅವಧಿಗೂ ಮುನ್ನವೇ ಮಗುವೊಂದಕ್ಕೆ ಜನ್ಮ ನೀಡಿದ ಒಂದೇ ತಿಂಗಳಲ್ಲಿ ಮತ್ತೆ ಆರೋಗ್ಯವಂತ ಅವಳಿ ಮಕ್ಕಳನ್ನು ಹೆತ್ತಿರುವ ಘಟನೆ ನಡೆದಿದೆ.

ಆರಿಫಾ ಸುಲ್ತಾನಾ (20) ಎಂಬ ಮಹಿಳೆ ಒಂದು ತಿಂಗಳ ಹಿಂದೆ ನಾರ್ಮಲ್​ ಡಿಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ವೈದ್ಯರು ಈ ವೇಳೆ ಎರಡನೇ ಗರ್ಭ ಇರುವುದನ್ನು ಗಮನಿಸದಿರುವುದು ಈ ವಿನೂತನ ಘಟನೆಗೆ ಸಾಕ್ಷಿಯಾಗಿದೆ.

ಮೊದಲ ಮಗುವಿನ ಜನನದ ಬಳಿಕ ಮಹಿಳೆಗೆ ನಾನಿನ್ನೂ ಗರ್ಭಿಣಿ ಆಗಿದ್ದೇನೆ ಎಂಬುದರ ಅರಿವಿರಲಿಲ್ಲ. ಆದರೆ, 26 ದಿನಗಳ ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಾಗಲೂ ಸಿಸೇರಿಯನ್​ ಮೂಲಕ ಕಳೆದ ಶುಕ್ರವಾರ ಹೆರಿಗೆ ಮಾಡಲಾಗಿದೆ. ಈ ವೇಳೆ ಒಂದು ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಯುವ ಮಹಿಳೆಯು ನೈಋತ್ಯ ಬಾಂಗ್ಲಾದೇಶದ ಜೆಸ್ಸೂರ್​ ಜಿಲ್ಲೆಯ ನಿವಾಸಿಯಾಗಿದ್ದು, ಮೂವರು ಆರೋಗ್ಯಕರವಾದ ಮಕ್ಕಳೊಂದಿಗೆ ಮಹಿಳೆಯನ್ನು ಮಂಗಳವಾರ ಡಿಸ್ಚಾರ್ಜ್​ ಮಾಡಿ ಕಳುಹಿಸಲಾಗಿದೆ.

ನನ್ನ ವೃತ್ತಿಜೀವನದ 30 ವರ್ಷಗಳಲ್ಲಿ ಇಂತಹ ಪ್ರಕರಣಗಳನ್ನು ನಾನೆಂದು ನೋಡಿಲ್ಲ. ಇದೇ ಮೊದಲ ಬಾರಿಗೆ ನೋಡಿದ್ದು, ನನಗೂ ಆಶ್ಚರ್ಯವಾಗಿದೆ ಎಂದು ಜೆಸ್ಸೂರು ಆಸ್ಪತ್ರೆಯ ವೈದ್ಯಾಧಿಕಾರಿ ದಿಲೀಪ್​ ರಾಯ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎರಡನೇ ಗರ್ಭಚೀಲ ಇರುವುದನ್ನು ಪತ್ತೆ ಮಾಡದ ಖಲ್ನಾ ವೈದ್ಯಕೀಯ ಆಸ್ಪತ್ರೆಯ ವೈದ್ಯರುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ ರಾಯ್​, ಮಹಿಳೆ ಸುಲ್ತಾನಾ ಮೂರು ಮಕ್ಕಳನ್ನು ಪಡೆದಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ. ಬಡ ಕುಟುಂಬದಲ್ಲಿ ಬಂದಿರುವ ಮಹಿಳೆಯಾಗಿದ್ದು, ಮಕ್ಕಳನ್ನು ಹೇಗೆ ಬೆಳೆಸುತ್ತಾಳೆಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು.

ಕೂಲಿಗಾರನಾಗಿರುವ ನನ್ನ ಪತಿ ತಿಂಗಳಿಗೆ 6,000 ಟಾಕಾ(ಬಾಂಗ್ಲಾ ಕರೆನ್ಸಿ)ವನ್ನು ಸಂಪಾದಿಸುತ್ತಾರೆ. ಈ ಸಣ್ಣ ಮೊತ್ತದಲ್ಲಿ ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಸುಲ್ತಾನ ಅಳಲು ತೋಡಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *