ಚೊಚ್ಚಲ ಫೈನಲ್ ಪಂದ್ಯ ಗೆದ್ದ ಬಾಂಗ್ಲಾದೇಶ

ಡಬ್ಲಿನ್(ಐರ್ಲೆಂಡ್): ಮಳೆ ಬಾಧಿತ ಪಂದ್ಯದಲ್ಲಿ ಮೊಸದಿಕ್ ಹುಸೇನ್(52ರನ್, 24ಎಸೆತ, 2ಬೌಂಡರಿ, 5ಸಿಕ್ಸರ್) ಬಾರಿಸಿದ ಅತಿ ವೇಗದ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ತ್ರಿಕೋನ ಏಕದಿನ ಸರಣಿಯಲ್ಲಿ ಪ್ರಶಸ್ತಿ ಜಯಿಸಿದೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಡಿಎಲ್​ಎಸ್ ನಿಯಮದನ್ವಯ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿತು. ಇದು ಟೂರ್ನಿಯೊಂದರ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಮೊಟ್ಟ ಮೊದಲ ಜಯವಾಗಿದೆ. ಟಾಸ್ ಸೋತು ವಿಂಡೀಸ್ ಬ್ಯಾಟಿಂಗ್​ಗೆ ಇಳಿಯಿತು. ಆದರೆ ಮಳೆ ಅಡಚಣೆಯಿಂದ ಪಂದ್ಯ 24 ಓವರ್​ಗೆ ಕಡಿತಗೊಂಡಿತು. ಶೈ ಹೋಪ್(74) ಮತ್ತು ಸುನೀಲ್ ಆಂಬ್ರಿಸ್(69) ಅರ್ಧಶತಕದಿಂದ ವಿಂಡೀಸ್ 24 ಓವರ್​ಗಳಲ್ಲಿ 1 ವಿಕೆಟ್​ಗೆ 152 ರನ್ ಪೇರಿಸಿತು. ಬಳಿಕ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ 210 ರನ್​ಗಳ ಪರಿಷ್ಕೃತ ಸವಾಲು ಪಡೆದ ಬಾಂಗ್ಲಾ, 22.5 ಓವರ್​ಗಳಲ್ಲಿ 5 ವಿಕೆಟ್​ಗೆ 213ರನ್ ಪೇರಿಸಿ ಜಯಿಸಿತು.

ಮೊಸದಿಕ್ ಬಾಂಗ್ಲಾ ಪರ ದಾಖಲೆಯ 20 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಗೆಲುವು ತಂದರು. ವೆಸ್ಟ್ ಇಂಡೀಸ್: 24 ಓವರ್​ಗಳಲ್ಲಿ 1 ವಿಕೆಟ್​ಗೆ 152 (ಶೈ ಹೋಪ್ 74, ಸುನೀಲ್ ಆಂಬ್ರಿಸ್ 69), ಬಾಂಗ್ಲಾದೇಶ: 22.5 ಓವರ್​ಗಳಲ್ಲಿ 5 ವಿಕೆಟ್​ಗೆ 213 (ಮೊಸದಿಕ್ 52*, ಸೌಮ್ಯ ಸರ್ಕಾರ್ 66, ಗ್ಯಾಬ್ರಿಯೆಲ್ 30ಕ್ಕೆ 2, ರೇಮನ್ ರೈಫರ್ 23ಕ್ಕೆ 2).

Leave a Reply

Your email address will not be published. Required fields are marked *