ಬಾಂಗ್ಲಾ ಸಂಸತ್​ ಚುನಾವಣೆಯಲ್ಲಿ ಮುಶ್ರಫೆ ಮೊರ್ಟಜಗೆ ಬಾರಿ ಗೆಲುವು: ಪ್ರತಿಸ್ಪರ್ಧಿ ಗಳಿಸಿದ್ದು ಕೇವಲ 8 ಸಾವಿರ ಮತ

ಢಾಕಾ: ಬಾಂಗ್ಲಾದೇಶದ 11 ನೇ ಸಂಸತ್​ ಚುನಾವಣೆಗೆ ಸ್ಪರ್ಧಿಸಿದ್ದ ಬಾಂಗ್ಲಾದ ಏಕದಿನ ಕ್ರಿಕೆಟ್​ ನಾಯಕ ಮುಶ್ರಫೆ ಮೊರ್ಟಜ ಅವರು ಭಾರಿ ಗೆಲುವು ಸಾಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳ ವರದಿ ಆಧರಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ವರದಿ ಮಾಡಿದೆ.

ಬಾಂಗ್ಲಾ ದೇಶದ ನರೈಲ್​ 2 ಕ್ಷೇತ್ರದಿಂದ ಆಡಳಿತಾರೂಢ ಅವಾಮಿ ಲೀಗ್​ನ ಅಭ್ಯರ್ಥಿಯಾಗಿ ಸಂಸತ್​ಗೆ ಸ್ಪರ್ಧಿಸಿದ್ದ ಮೊರ್ಟಜ ಒಟ್ಟಾರೆ 274,418 ಮತ ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿ ಕೇವಲ 8006 ಮತಗಳನ್ನಷ್ಟೇ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ 11ನೇ ಸಂಸತ್​ಗೆ ನಿನ್ನೆಯಷ್ಟೇ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಆಡಳಿತಾ ರೂಢ ಶೇಖ್​ ಹಸೀನ ಅವರ ಪಕ್ಷ ಅವಾಮಿ ಲೀಗ್​ ಮೂರನೇ ಬಾರಿಗೆ ಗೆದ್ದಿದೆ.