ಬಾಂಗ್ಲಾದಲ್ಲಿ ಇಂದು ಮತದಾನ

ಢಾಕಾ: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಾಂಗ್ಲಾ ದೇಶದಲ್ಲಿ ಭಾನುವಾರ ಮತದಾನ ನಡೆಯಲಿದೆ. ದೋಣಿ ಮತ್ತು ಭತ್ತದ ಹೊರೆಯ ಚಿಹ್ನೆಗಳನ್ನು ಹೊಂದಿರುವ ಪ್ರಮುಖ ಪಕ್ಷಗಳಾದ ಅವಾಮಿ ಲೀಗ್ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ಸೇರಿ 30ಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಬಿಎನ್​ಪಿ ಒಟ್ಟು 13 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಜಾತಿಯಾ ಒಯಿಕ್ಯಾ ಫ್ರಂಟ್ ಎಂಬ ಮೈತ್ರಿಕೂಟದೊಂದಿಗೆ ಶತಾಯಗತಾಯ ಅವಾಮಿ ಲೀಗ್​ನ್ನು ಮಣಿಸಲು ಸಜ್ಜಾಗಿದೆ.

ಎಲ್ಲ ರಾಜಕೀಯ ಪಕ್ಷಗಳು ಕಣದಲ್ಲಿ ಅಭ್ಯರ್ಥಿಗಳನ್ನು ಇಳಿಸುತ್ತಿರುವುದರಿಂದ 1971ರಲ್ಲಿ ದೇಶ ರಚನೆಯಾದ ಬಳಿಕ ನಡೆಯುತ್ತಿರುವ ಈ ಬಾರಿಯ 11ನೇ ಸಾರ್ವತ್ರಿಕ ಚುನಾವಣೆ ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ಒಟ್ಟು 1,800 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

299 ಕ್ಷೇತ್ರಗಳಲ್ಲಿ ಚುನಾವಣೆ: ಒಟ್ಟು 300 ಸ್ಥಾನಗಳನ್ನು ಹೊಂದಿರುವ ಬಾಂಗ್ಲಾ ಸಂಸತ್​ಗೆ ಸದ್ಯ 299 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಯ ಸಾವಿನಿಂದಾಗಿ ಒಂದು ಕ್ಷೇತ್ರದ ಮತದಾನ ಮುಂದೂಡಲ್ಪಟ್ಟಿದೆ.

ತಮ್ಮ ನಾಯಕಿ ಖಲೀದಾ ಜಿಯಾ ಜೇಲಿನಲ್ಲಿದ್ದರೂ ಬಿಎನ್​ಪಿ ಮೈತ್ರಿಕೂಟ ಗೆಲುವಿನ ವಿಶ್ವಾಸದಲ್ಲಿದೆ. ಅವಾಮಿ ಲೀಗ್ ಕಣಕ್ಕಿಳಿಸಿರುವ ಹೆಚ್ಚಿನಂಶದ ಅಭ್ಯರ್ಥಿಗಳು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. 70ಕ್ಕೂ ಹೆಚ್ಚು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದು ಅವಾಮಿ ಲೀಗ್​ನ ಗೆಲುವಿಗೆ ಭಾರಿ ಅಡಚಣೆ ಉಂಟಾಗಿದೆ. ಡಿ.31ಕ್ಕೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗುವ ಸಾಧ್ಯತೆ ಇದೆ.