ನ್ಯೂಜಿಲೆಂಡ್​ ಮಸೀದಿ ಗುಂಡಿನ ದಾಳಿ: ಮೃತಪಟ್ಟವರ ಸಂಖ್ಯೆ 49 ಕ್ಕೆ ಏರಿಕೆ, 3ನೇ ಟೆಸ್ಟ್​ ರದ್ದು

ಕ್ರೈಸ್ಟ್​ಚರ್ಚ್​: ನ್ಯೂಜಿಲೆಂಡ್​ನ 2 ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್​ ತಂಡದ ಆಟಗಾರರು ಕೂದಲೆಳೆ ಅಂತರದಲ್ಲಿ ಪಾರಾದ ಹಿನ್ನೆಲೆಯಲ್ಲಿ ತಂಡದ ಪ್ರವಾಸವನ್ನು ರದ್ದುಗೊಳಿಸಲಾಗಿದೆ.

ಬಾಂಗ್ಲಾದೇಶ ಆಟಗಾರರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋಗಿದ್ದರು. ಅವರು ಮಸೀದಿಯೊಳಗೆ ಪ್ರವೇಶಿಸುವ ವೇಳೆ ಅಲ್ಲಿ ಗುಂಡಿನ ದಾಳಿ ನಡೆದಿದೆ. ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ತಂಡದ ಎಲ್ಲಾ ಆಟಗಾರರು ಸುರಕ್ಷಿತವಾಗಿ ಘಟನಾ ಸ್ಥಳದಿಂದ ಹೋಟಲ್​ಗೆ ವಾಪಸಾಗಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರದಿಂದ ಆರಂಭವಾಗಬೇಕಿದ್ದ ಮೂರನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ ತಿಳಿಸಿದೆ.

ಬಾಂಗ್ಲಾದೇಶ ಆಟಗಾರರು ನ್ಯೂಜಿಲೆಂಡ್​ಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದು, ಆದಷ್ಟು ಶೀಘ್ರ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಬಾಂಗ್ಲಾದೇಶದ ನ್ಯೂಸ್​ ಏಜೆನ್ಸಿ ವರದಿ ಮಾಡಿದೆ.

ಮೃತರ ಸಂಖ್ಯೆ 49ಕ್ಕೆ ಏರಿಕೆ:

2 ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 49 ಕ್ಕೆ ಏರಿಕೆಯಾಗಿದೆ. ಎಷ್ಟು ಶೂಟರ್​ಗಳು ಮಸೀದಿಯಲ್ಲಿ ಗುಂಡು ಹಾರಿಸಿದ್ದರು ಎಂಬುದು ಈಗ ತಿಳಿದಿಲ್ಲ. ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಐಇಡಿ ಬಾಂಬ್​ಗಳು ಪತ್ತೆಯಾಗಿದ್ದು ಸೇನಾಪಡೆ ಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.