ಸಾನಿಯಾ ಮಿರ್ಜಾರನ್ನು ಚುಡಾಯಿಸಿದ್ದ ಬಾಂಗ್ಲಾ ಕ್ರಿಕೆಟಿಗನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ!

ಢಾಕಾ: ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರನ್ನು ಚುಡಾಯಿಸಿದ್ದ ಬಾಂಗ್ಲಾದೇಶಿ ಕ್ರಿಕೆಟಿಗ ಸಬ್ಬೀರ್​ ರಹ​ಮಾನ್ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಆರು ತಿಂಗಳ ನಿಷೇಧಕ್ಕೊಳಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರನ್ನು ನಿಂದಿಸಿದ್ದಕ್ಕೆ ಮತ್ತು ಸಬ್ಬೀರ್​ನ ಹಳೆಯ ನಡವಳಿಕೆಗಳನ್ನು ಪರಿಗಣಿಸಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯ(ಬಿಸಿಬಿ) ಶಿಸ್ತು ಪಾಲನಾ ಸಮಿತಿ ನಿಷೇಧ ಆದೇಶ ಹೊರಡಿಸಿದೆ.

ಬಿಸಿಬಿ ಅಧ್ಯಕ್ಷ ನಜ್ಮುಲ್​ ಹಸನ್​ ಈ ಆದೇಶಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಸಬ್ಬೀರ್​ ಇನ್ನು ಆರು ತಿಂಗಳು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾವಳಿಗಳಲ್ಲಿ ಆಡುವಂತಿಲ್ಲ. ಸೆಪ್ಟೆಂಬರ್​ 15ರಂದು ಆರಂಭವಾಗಲಿರುವ ಏಷ್ಯ ಕಪ್​ನಿಂದಲೂ ದೂರ ಉಳಿಯಬೇಕಿದೆ.

ಸಬ್ಬೀರ್​ ಮೇಲೆ ಬಿಸಿಬಿ ಶಿಸ್ತು ಪಾಲನಾ ಸಮಿತಿ ಎರಡನೇ ಬಾರಿ ನಿಷೇಧ ಹೇರಿದ್ದು, ಇನ್ನೊಮ್ಮೆ ಇದೇ ತಪ್ಪು ಮಾಡಿದರೆ ದೀರ್ಘಕಾಲದ ಅಥವಾ ಜೀವನ ಪರ್ಯಂತ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ ಹೇರುವುದಾಗಿ ಸಮಿತಿ ಎಚ್ಚರಿಸಿದೆ.

ಈ ಹಿಂದೆ ಖಾಸಗಿ ಹೊಟೆಲ್ ಗೆ ಅನುಮತಿ ಇಲ್ಲದೇ ಮಹಿಳೆಯನ್ನು ಕರೆತಂದು ಕೊಠಡಿಯೊಳಗೆ ಇರಿಸಿದ್ದಕ್ಕೆ ಸಂಬಂಧಿಸಿದಂತೆ ಸಬ್ಬೀರ್​ 6 ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಈ ಶಿಕ್ಷೆಯೇ ಇನ್ನು ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ಮತ್ತೆ ಸಬ್ಬೀರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಸಾನಿಯಾರನ್ನು ಬಿಟ್ಟಿರಲಿಲ್ಲ ಸಬ್ಬೀರ್​

ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರನ್ನು ಸಬ್ಬೀರ್​ ಚುಡಾಯಿಸಿದ್ದರು ಎಂದು ಸಾನಿಯಾ ಪತಿ ಶೋಯೆಬ್​ ಮಲಿಕ್​ ಆರೋಪಿಸಿದ್ದರು.

ನಾಲ್ಕು ವರ್ಷಗಳ ಹಿಂದೆ ಕ್ರಿಕೆಟ್ ಪಂದ್ಯಾವಳಿಗಾಗಿ ಬಾಂಗ್ಲಾದೇಶಕ್ಕೆ ಆಗಮಿಸಿದ್ದೆ. ಆಗ ಪತ್ನಿಯೊಂದಿಗೆ ಫೀಲ್ಡ್​ಗೆ ಬಂದ ವೇಳೆ ಸಬ್ಬೀರ್​ ಸಾನಿಯಾರನ್ನು ಚುಡಾಯಿಸಿದ್ದರು ಎಂದು ಪಾಕಿಸ್ತಾನ ಕ್ರಿಕೆಟರ್​ ಶೋಯೆಬ್​ ಮಲ್ಲಿಕ್​ ಕ್ರಿಕೆಟ್​ ಕಮಿಟಿ ಆಫ್​ ಢಾಕಾ ಮೆಟ್ರೊಪೊಲಿಸ್​ (ಸಿಸಿಡಿಎಂ) ಮುಖ್ಯಸ್ಥರಿಗೆ ದೂರು ನೀಡಿದ್ದರು ಎಂದು ಬಾಂಗ್ಲಾದೇಶದ ಮಾಧ್ಯಮ ವರದಿ ಮಾಡಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *