ಗಾಳಿಪುರ ಅಂಗನವಾಡಿಯಲ್ಲಿ ಬಾಂಗ್ಲಾದೇಶ-2 ನಾಮಫಲಕ

ಚಾಮರಾಜನಗರ: ನಗರದ ಗಾಳಿಪುರ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ ಬಾಂಗ್ಲಾದೇಶ-2 ಎಂದು ಬರೆದಿರುವುದು ಬೆಳಕಿಗೆ ಬಂದಿದೆ.

ನಗರದ 5-6ನೇ ವಾರ್ಡ್‌ಗಳಿಗೆ ಸೇರಿದ ಗಾಳಿಪುರ ಬಡಾವಣೆಯ ಎ.ಜೆ.ನ್ಯಾಯಬೆಲೆ ಅಂಗಡಿ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ಬಾಂಗ್ಲಾದೇಶ-2 ಎಂದು ಬರೆಯಲಾಗಿದೆ. ಅಜಾದ್ ಹಿಂದು ಸೇನೆ ಈ ವಿಷಯವನ್ನು ಪ್ರತಿಭಟನೆ ಮೂಲಕ ಬಹಿರಂಗ ಪಡಿಸುತ್ತಿದ್ದಂತೆ ಅತ್ತ ನಾಮಫಲಕವನ್ನು ನಾಪತ್ತೆ ಮಾಡಲಾಗಿದೆ.
ನಾಮಫಲಕದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿ,ತಿ ಚಾಮರಾಜನಗರ,ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕೇಂದ್ರ ಬಾಂಗ್ಲಾದೇಶ-2 ಎಂದು ಬರೆಯಲಾಗಿದೆ. ಯಾವಾಗ ಬರೆಯಲಾಗಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಅನುಮತಿ ಇಲ್ಲದೆ ನಾಮಫಲಕ ತೆರವು ಮಾಡಲಾಗಿದೆ. ಫಲಕ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನಾಪತ್ತೆಯಾಗಲಿದೆ ಎಂಬುದು ಗೊತ್ತಿದ್ದರೆ ನಾವೇ ನಾಮಫಲಕವನ್ನು ಮೆರವಣಿಗೆ ಮಾಡಿ ತರುತ್ತಿದ್ದೆವು ಎಂದು ಸೇನೆ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಶಾಹೀದಾಬಾನು ಎಂಬುವರು ಅಂಗನವಾಡಿ ಕೇಂದ್ರದ ಕಾರ್ಯಕರ್ತರಾಗಿದ್ದು, ಈ ನಾಮಫಲಕ 5-6 ತಿಂಗಳಿನಿಂದಲೂ ಇದೆ ಎಂದು ಸಾರ್ವಜನಿಕರು ನಮಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸ್ಥಳಕ್ಕೆ ತೆರಳಿ ವೀಕ್ಷಿಸಿದಾಗ ಬಾಂಗ್ಲಾದೇಶ-2 ಎಂದು ಬರೆದಿರುವುದು ಗಮನಕ್ಕೆ ಬಂತು ಎಂದು ಸೇನೆ ಅಧ್ಯಕ್ಷ ಪೃಥ್ವಿರಾಜ್ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಸಂಜೆ ಜಿಲ್ಲಾಡಳಿತ ಭವನದ ಎದುರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದ್ದಾರೆ.

ಈ ವೇಳೆ ಮಾತನಾಡಿದ ಬಸವರಾಜು ಅವರು, ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಇದೊಂದು ಹಳೆಯ ನಾಮಫಲಕ ಎಂದು ಪ್ರತಿಭಟನಾಕಾರರ ಮನವೊಲಿಸಲು ಮುಂದಾಗಿದ್ದರು. ಆದರೆ, ಪ್ರತಿಭಟನಾಕಾರರು ಅವರಿಗೆ ಮನವಿ ನೀಡದೆ ವಾಪಸ್ ಕಳುಹಿಸಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಅನೂಷ್ ಅವರಿಗೆ ಮನವಿ ಸಲ್ಲಿಸಿದ್ದರು.

ಸರ್ಕಾರಿ ನಾಮಫಲಕಕ್ಕೆ ಬಾಂಗ್ಲಾದೇಶ-2 ಎಂದು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ. ನಗರದ ಗಾಳಿಪುರ ಬಡಾವಣೆಯಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶದವರು ನೆಲೆಸಿದ್ದಾರೆ ಎಂದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆವು. ಆದರೆ, ಯಾವುದೇ ಕ್ರಮ ವಹಿಸಲಿಲ್ಲ. ಬಾಂಗ್ಲಾದೇಶ ಎಂದು ಹೆಸರು ಬರೆದಿರುವುದು ಪತ್ತೆಯಾಗಿದೆ. ಈಗ ಅಧಿಕಾರಿಗಳು ಏನು ಹೇಳುತ್ತಾರೆ.
ಪೃಥ್ವಿರಾಜ್, ಅಜಾದ್ ಹಿಂದು ಸೇನೆ ಅಧ್ಯಕ್ಷ

ಗಾಳಿಪುರ ಬಡಾವಣೆಯ ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ ಬಾಂಗ್ಲಾದೇಶ-2 ಎಂದು ಬರೆದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ಗೊತ್ತಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ವಹಿಸಲಾಗುವುದು.
ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ

Leave a Reply

Your email address will not be published. Required fields are marked *