ಬ್ಯಾಂಕಾಕ್​ನಲ್ಲಿ ಹೆಚ್ಚಿದ ವಾಯುಮಾಲಿನ್ಯ, ಜನರ ಮೂಗಿನಿಂದ ಜಿನುಗುತ್ತಿದೆ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಿತಿ ಮೀರಿದೆ. ಇದರಿಂದಾಗಿ ಜನರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜನರ ಮೂಗಿನಿಂದ ರಕ್ತ ಒಸರುತ್ತಿದೆ ಅಲ್ಲದೆ, ಜನರ ಕಣ್ಣುಗಳು ರಕ್ತವರ್ಣಕ್ಕೆ ತಿರುಗುತ್ತಿವೆ. ತಮ್ಮ ಮೂಗಿನಿಂದ ರಕ್ತ ಜಿನುಗುತ್ತಿರುವುದು ಹಾಗೂ ಕಣ್ಣುಗಳು ರಕ್ತವರ್ಣಕ್ಕೆ ತಿರುಗಿರುವ ಚಿತ್ರಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಉಸಿರಾಡುವ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ಪಿಎಂ 2.5 ಇರಬೇಕು. ಆದರೆ, ಬ್ಯಾಂಕಾಕ್​ನ 41ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಮಟ್ಟ ಅಪಾಯಕಾರಿ ಮಟ್ಟವನ್ನೂ ಮೀರಿದೆ ಎಂದು ಥಾಯ್ಲೆಂಡ್​ನ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಿ ವಿರೋಧಿ ಅಭಿಯಾನ ಆರಂಭಿಸಿದ್ದಾರೆ. ಜತೆಗೆ, ಮಾಲಿನ್ಯದ ದುಷ್ಪರಿಣಾಮದಿಂದ ಪಾರಾಗಲು ಯಾವೆಲ್ಲ ರೀತಿಯ ಮಾಸ್ಕ್​ಗಳನ್ನು ಧರಿಸುವುದು ಸುರಕ್ಷಿತ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮೋಡ ಬಿತ್ತನೆ: ವಾಯು ಮಾಲಿನ್ಯಕ್ಕೆ ಕಾರಣವಾದ ಸೂಕ್ಷ್ಮ ಮಾಲಿನ್ಯಕಾರಕಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಥಾಯ್ಲೆಂಡ್​ ಸರ್ಕಾರ ಮೋಡ ಬಿತ್ತನೆ ಮಾಡಿ, ಮಳೆ ತರಿಸುವ ಪ್ರಯತ್ನ ಮಾಡಿತು. ಆದರೆ, ಅದರ ಈ ಪ್ರಯತ್ನ ವಿಫಲವಾಗಿದೆ. ಟ್ಯಾಂಕರ್​ಗಳನ್ನು ಬಳಸಿ ಮುಗಿಲೆತ್ತರಕ್ಕೆ ನೀರು ಸಿಡಿಸುವ ಮೂಲಕ ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಎನ್ನಲಾಗಿದೆ.