ಬೇತಮಂಗಲ: ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರೇ ದಿನದಲ್ಲಿ ಪತ್ನಿಯೂ ಮೃತಪಟ್ಟಿರುವುದು ಬೇತಮಂಗಲದ ವೆಂಕಟಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಭೋವಿ ಸಮುದಾಯದ ಶ್ರೀನಿವಾಸ್ (55), ಈಶ್ವರಮ್ಮ (40) ಮೃತರು. 15 ದಿನಗಳ ಹಿಂದೆ ಈಶ್ವರಮ್ಮಅನಾರೋಗ್ಯಕ್ಕೆ ತುತ್ತಾದಾಗ ಆಂಧ್ರದ ಕುಪ್ಪಂನಲ್ಲಿರುವ ಪಿಇಎಸ್ ಆಸ್ಪತ್ರೆಗೆ ಸೇರಿಸಿ 1 ಲಕ್ಷ ರೂ.ವರೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. 4 ದಿನಗಳ ನಂತರ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಶ್ರೀನಿವಾಸ್ ಮನೆಗೆ ಬಂದು ಹೊಲದ ಬಳಿ ವಿಷ ಕುಡಿದಿದ್ದಾರೆ. ಮನೆಯಲ್ಲಿದ್ದ ಸೊಸೆ ಇತರರು ಕೋಲಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ.
ಈ ಮಧ್ಯೆ ಪತ್ನಿ ಈಶ್ವರಮ್ಮಆರೋಗ್ಯ ಮತ್ತಷ್ಟು ಗಂಭೀರವಾದಾಗ ಕುಪ್ಪಂ ಮೆಡಿಕಲ್ ಆಸ್ಪತ್ರೆ ವೈದ್ಯರು ಬೇರೆ ಕಡೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಸಂಬಂಧಿಕರು ಕೋಲಾರದ ಎಸ್‌ಎನ್‌ಆರ್ ನಂತರ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ದಗ ಚಿಕಿತ್ಸೆ ನೀಡಿದೆ ವಾಪಸ್ ಕಳುಹಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದು, ಅಲ್ಲಿ ಸುಮಾರು 2 ಲಕ್ಷ ರೂ.ಖರ್ಚು ಮಾಡಿಸಿ ನಂತರ ಶವ ವಾಪಸ್ ನೀಡಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ.