ಮಲ್ಪೆಯ ಬೀಚ್‌ನಲ್ಲಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಉಡುಪಿ: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ತುಮಕೂರು ಜಿಲ್ಲೆ ತಿಪಟೂರು ನಿವಾಸಿ ಕೀರ್ತನ್ ಸಿಂಹ(22) ಎಂಬುವರು ಮಂಗಳವಾರ ಮಲ್ಪೆಯಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಅಂತಿಮ ಬಿಇ ಪರೀಕ್ಷೆ ಮುಗಿಸಿದ್ದ ಕಾಲೇಜಿನ 30 ವಿದ್ಯಾರ್ಥಿಗಳ ತಂಡ ಮಂಗಳವಾರ ಉಡುಪಿ ಪ್ರವಾಸಕ್ಕೆ ಆಗಮಿಸಿದ್ದು, ಬೆಳಗ್ಗೆ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಮಧ್ಯಾಹ್ನ ಮಲ್ಪೆ ಬೀಚ್‌ಗೆ ತೆರಳಿತ್ತು. ಮಲ್ಪೆಯಿಂದ ತೊಟ್ಟಂ ಬೀಚ್ ಕಡೆ ಸಾಗಿದ ವಿದ್ಯಾರ್ಥಿಗಳು ಈಜಾಡಲು ಸಮುದ್ರಕ್ಕಿಳಿದಿದ್ದರು. ಈ ಸಂದರ್ಭ ನಾಲ್ವರು ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಜೀವರಕ್ಷಕ ಸಿಬ್ಬಂದಿ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುವಷ್ಟರಲ್ಲಿ ಕೀರ್ತನ್ ಮೃತಪಟ್ಟಿದ್ದಾರೆ. ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವರಕ್ಷಕರ ಸೂಚನೆ ನಿರ್ಲಕ್ಷ್ಯ: ಮಲ್ಪೆ ಬೀಚ್ ಸಮುದ್ರದಲ್ಲಿ ಆಟವಾಡುತ್ತಿದ್ದ ಯುವಕರಿಗೆ ಸಮುದ್ರದಲ್ಲಿ ತೀರಾ ಮುಂದಕ್ಕೆ ಹೋಗದಂತೆ ಜೀವರಕ್ಷಕ ಸಿಬ್ಬಂದಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ಜೀವರಕ್ಷಕ ಸಿಬ್ಬಂದಿ ಕಿರಿಕಿರಿ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಮಲ್ಪೆ ಬೀಚ್‌ನಿಂದ ತೊಟ್ಟಂ ಬೀಚ್ ಕಡೆಗೆ ಹೆಜ್ಜೆ ಹಾಕಿದ್ದರು ಎನ್ನಲಾಗಿದೆ.