ರೋಷದ ಟೀಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ತತ್ತರ: ರೋಷನ್ ಬೇಗ್​ಗೆ ಅಧಿಕಾರದಾಹ ಎಂದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ರಾಜ್ಯ ನಾಯಕತ್ವದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ವಾಗ್ದಾಳಿಗಳಿಂದ ರಾಜ್ಯದ ಪ್ರಮುಖ ನಾಯಕರು ಜಝುರಿತರಾಗಿದ್ದಾರೆ. ಒಂದೆಡೆ ಪಕ್ಷದ ಹಿರಿಯ ನಾಯಕರ ಚುಚ್ಚುಮಾತು, ಮತ್ತೊಂದೆಡೆ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಮಾಡುತ್ತಿರುವ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಶಾಸಕ ರೋಷನ್ ಬೇಗ್ ‘ಬಫೂನ್’ ‘ದುರಹಂಕಾರಿ’ ‘ಅಸಮರ್ಥ’ ಪದ ಬಳಸಿ ಟೀಕಿಸಿದ್ದರಿಂದ ಈ ಇಬ್ಬರು ನಾಯಕರು ಅಕ್ಷರಶಃ ಗಲಿಬಿಲಿಗೊಂಡಿದ್ದು, ತಲೆ ತಗ್ಗಿಸುವಂತಾಗಿದೆ.

ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ರಾಜ್ಯ ನಾಯಕರ ಮೇಲೆ ಬರುತ್ತಿರುವ ಆರೋಪಗಳು ಪಕ್ಷದ ಮಟ್ಟದಲ್ಲಂತೂ ಸಂಚಲನ ಮೂಡಿಸಿವೆ. ಒಂದು ವೇಳೆ ಪಕ್ಷದ ಪರವಾಗಿ ಫಲಿತಾಂಶ ಬಾರದೆ ಇದ್ದಲ್ಲಿ ಟೀಕೆಗೊಳಗಾದ ನಾಯಕರು ಇನ್ನಷ್ಟು ಸಂಕಷ್ಟಕ್ಕೆ ದೂಡಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದ ಅಲ್ಪಸಂಖ್ಯಾತ ನಾಯಕ ರೋಷನ್ ಬೇಗ್ ಈ ರೀತಿ ಮಾತನಾಡಿದ್ದು ಸರಿಯೇ? ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಪ್ರಶ್ನೆ ಎತ್ತಿದರೆ, ವಿಭಿನ್ನ ಅಭಿಪ್ರಾಯವ್ಯಕ್ತವಾಗಿದೆ. ‘ಬೇಗ್ ಸರಿಯಾಗಿಯೇ ಹೇಳಿದ್ದಾರೆ, ಇಲ್ಲಿ ಎಲ್ಲವೂ ಸರಿ ಇಲ್ಲ. ನಾವು ಹೇಳಿದರೆ ತುಳಿದು ಬಿಡುತ್ತಾರೆ, ಅವರು ಹೇಳಿದ್ದರಲ್ಲಿ ತಪ್ಪಿಲ್ಲ’ ಎಂದು ಕೆಲ ನಾಯಕರು ಹೇಳಿದರೆ, ‘ರೋಷನ್ ಬೇಗ್ ಹೋಗುವುದಿದ್ದರೆ ಪಕ್ಷ ಬಿಟ್ಟುಹೋಗುವುದೆ ಸೂಕ್ತ’ ಎಂದು ಕೆಲವರು ಅಭಿಪ್ರಾಪಟ್ಟಿದ್ದಾರೆ. ರೋಷನ್ ಬೇಗ್​ಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎನ್ನುವವರೂ ಇದ್ದಾರೆ.

ಆಗ ಜಾಫರ್ ಷರೀಫ್ ವಿರುದ್ಧ ರೋಷನ್ ಬೇಗ್ ಎತ್ತಿಕಟ್ಟಿದ್ದರು. ಇಂದು ಬೇಗ್ ವಿರುದ್ಧ ಜಮೀರ್ ತರುತ್ತಿದ್ದಾರೆ. ಜಮೀರ್ ಕಾಂಗ್ರೆಸ್​ನಲ್ಲೇನು ಶಾಶ್ವತವಲ್ಲ. ರೋಷನ್ ಪಕ್ಷ ನಿಷ್ಠರು. ಈ ರೀತಿ ಮಾತನಾಡುವಂತೆ ಮಾಡಿದ್ದೆ ರಾಜ್ಯ ನಾಯಕರು ಎಂದು ಹಳೇ ಘಟನೆ ನೆನಪಿಸುವ ಹಿರಿಯರೂ ಇದ್ದಾರೆ. ಸಂಪುಟ ಪುನಾರಚನೆ ವೇಳೆ, ಲೋಕ ಟಿಕೆಟ್ ನಿರಾಕರಿಸಿದಾಗ ನಾಯಕರು ಬೇಗ್​ರನ್ನು ಕರೆದು ಮಾತನಾಡಿಸಿ ಮನವೊಲಿಸಬೇಕಿತ್ತು. ಈ ಕೆಲಸ ಮಾಡದೆ ಇರುವುದು ನಾಯಕತ್ವದ ವೈಫಲ್ಯವಲ್ಲದೆ ಮತ್ತಿನ್ನೇನು ಎಂದು ಹಿರಿಯ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಈ ರೀತಿ ನಾಯಕರನ್ನು ಕಳೆದುಕೊಂಡರೆ ದೂರಗಾಮಿ ಪರಿಣಾಮ ಹೆಚ್ಚಾಗಿರುತ್ತದೆ. ಇನ್ನು ಹಿರಿಯ ನಾಯಕರು ಪಕ್ಷಕ್ಕೆ ಹೆಚ್ಚಿನ ಶ್ರಮ ಹಾಕಲು ಮುಂದೆ ಬರುವುದಿಲ್ಲ. ತಾವಾಯಿತು ತಮ್ಮದಾಯಿತೆಂದಿದ್ದರೆ ಪಕ್ಷಕ್ಕೆ ನಷ್ಟ ಎಂದು ಅಭಿಪ್ರಾಯಪಟ್ಟರು.

ಪ್ರತಿಪಕ್ಷಕ್ಕೆ ಪ್ರಬಲ ಅಸ್ತ್ರ

ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ ಸಾಕಷ್ಟು ವರ್ಷದಿಂದ ಪಕ್ಷದಲ್ಲಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಕಟ್ಟಲು ಶ್ರಮಿಸುತ್ತಿದ್ದಾರೆ. ಅವರನ್ನು ಪರ್ಸನಲ್ ಎಟಿಎಂ ರೀತಿ ಬಳಸಲಾಗುತ್ತಿದೆ ಎಂದು ರೋಷನ್ ಬೇಗ್ ಆರೋಪ ಗಂಭೀರದ್ದಾಗಿದ್ದು, ಪಕ್ಷದ ವೇದಿಕೆಯಲ್ಲಿ ಚರ್ಚೆಗೂ ಆಹಾರವಾಗಿದೆ. ಹಣ ಪಡೆದು ಖಾತೆ ಹಂಚಿರುವ ಕೈ ನಾಯಕರು ಆಪರೇಷನ್ ಕಮಲದ ಬಗ್ಗೆ ಮಾತನಾಡುವುದು ಅಪಹಾಸ್ಯ ಎಂಬ ಬೇಗ್ ಟೀಕೆಯಿಂದ ಪಕ್ಷಕ್ಕೆ ಮುಜುಗರವಾದಂತಾಗಿದೆ. ಪ್ರತಿಪಕ್ಷದ ನಾಯಕರಿಗೆ ಅಸ್ತ್ರಕೊಟ್ಟಂತಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ರೋಷಾಗ್ನಿ ವಿರುದ್ಧ ಕ್ರಮವಿಲ್ಲ

ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ನೇರ ಟೀಕೆ ಮಾಡಿರುವ ಶಾಸಕ ರೋಷನ್ ಬೇಗ್ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರಲು ಪಕ್ಷ ನಿರ್ಧರಿಸಿದೆ. ಫಲಿತಾಂಶ ನಂತರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಚರ್ಚೆ ನಡೆಸಿ, ಅವರ ಸೂಚನೆ ಪಾಲಿಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಪರ ಬೇಗ್ ಕೆಲಸ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಅಧಿಕಾರ ದಾಹದಿಂದ ರೋಷನ್ ಬೇಗ್ ಈ ರೀತಿ ಹೇಳಿದ್ದಾರೆ. ಮಂತ್ರಿಗಿರಿಗೂ ಆಸೆ ಪಟ್ಟಿದ್ದರು. ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಇದರಿಂದ ಆ ರೀತಿ ಮಾತನಾಡಿದ್ದಾರೆ.

| ಸಿದ್ದರಾಮಯ್ಯ ಮಾಜಿ ಸಿಎಂ

Leave a Reply

Your email address will not be published. Required fields are marked *