ಸ್ವಚ್ಛ, ಭ್ರಷ್ಟಾಚಾರಮುಕ್ತ ಆಡಳಿತ ಗುರಿ

ಬೆಂಗಳೂರು: ಟಿಡಿಆರ್, ನಕಲಿ ಖಾತಾ ಹಗರಣಗಳಿಂದಾಗಿ ಬಿಬಿಎಂಪಿಗೆ ಕೆಟ್ಟ ಹೆಸರು ಬರುವಂತಾಯಿತು. ಕೆಲವರು ಮಾಡುವ ತಪ್ಪಿನಿಂದಾಗಿ ಸಾರ್ವಜನಿಕ ವಲಯದಲ್ಲಿ ಮುಜುಗರ ಅನುಭವಿಸಬೇಕಾಯಿತು. ನನ್ನ ಅವಧಿಯಲ್ಲಿ ಕೇಳಿ ಬರುವ ಯಾವುದೇ ಆರೋಪವಿದ್ದರೂ ಸತ್ಯಾಸತ್ಯತೆ ಬಯಲಿಗೆಳೆಯಲು ತನಿಖೆಗೆ ಆದೇಶಿಸುವುದಾಗಿ ಹೇಳುವ ಮೂಲಕ ಭ್ರಷ್ಟಾಚಾರಮುಕ್ತ ಆಡಳಿತ ನಡೆಸುವುದಾಗಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ಆಯೋಜಿಸಿದ್ದ ಫೋನ್​ಇನ್ ಕಾರ್ಯಕ್ರಮ ನಂತರ ನಡೆದ ಸಂವಾದದಲ್ಲಿ ತಮ್ಮ ಆಡಳಿತ, ಗುರಿ, ಬೆಂಗಳೂರಿನ ಅಭಿವೃದ್ಧಿ ಕುರಿತಂತೆ ಮಾತನಾಡಿದರು. ಅದರಲ್ಲೂ ಸ್ವಚ್ಛ ಬೆಂಗಳೂರು ನಿರ್ಮಾಣ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದಕ್ಕೆ ಮೊದಲ ಆದ್ಯತೆ ಎಂದು ತಿಳಿಸಿದರು. ಅದಕ್ಕೆ ಏನೆಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ: ಈ ಹಿಂದಿನ ಆಡಳಿತ ಹೇಗಿತ್ತು ಎಂಬುದು ಬೇಡ. ಆದರೆ, ನಾನು ಮೇಯರ್ ಆಗಿದ್ದಷ್ಟು ದಿನ ಭ್ರಷ್ಟಾಚಾರರಹಿತ ಆಡಳಿತ ನೀಡಬೇಕೆಂದು ಗುರಿ ಹೊಂದಿದ್ದೇನೆ. ಪ್ರತಿ ಅಧಿಕಾರಿ, ಜನಪ್ರತಿನಿಧಿ ಕೂಡ ಅದಕ್ಕೆ ಸಹಕರಿಸುತ್ತಿದ್ದಾರೆ. ಅದರ ನಡುವೆಯೂ ಟಿಡಿಆರ್, ನಕಲಿ ಖಾತೆ ನೀಡುವುದು ಸೇರಿ ಇನ್ನಿತರ ಅಕ್ರಮಗಳು ಹೊರಬೀಳುತ್ತಿವೆ. ಅವನ್ನೆಲ್ಲ ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಮುಂದೆಯೂ ಯಾವುದೇ ಆರೋಪವಿರಲಿ, ತನಿಖೆಗೊಳಪಡಿಸಲಾಗುವುದು ಎಂದರು.

ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ: ತ್ಯಾಜ್ಯ ಸಮಸ್ಯೆ ಬಗ್ಗೆ ಮಾತನಾಡಿದ ಮೇಯರ್, ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಗಾರ್ಬೆಜ್ ಸಿಟಿ ಎಂಬ ಹೆಸರು ಪಡೆದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತ್ಯಾಜ್ಯ ನಿರ್ವಹಣೆಗೆ ಹೊಸ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದೆ. ವಾರ್ಡ್ ಜನಸಂಖ್ಯೆಗೆ ಅನುಗುಣವಾಗಿ ಆಟೋ, ಕಾಂಪ್ಯಾಕ್ಟರ್ ನಿಯೋಜಿಸಲಾಗುತ್ತಿದೆ. ಜತೆಗೆ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸಬೇಕಿದೆ. ಜನ ಜಾಗೃತ ರಾದರೆ ಸಮಸ್ಯೆ ನಿವಾರಣೆಯಾಗಲಿದೆ. ನನ್ನ ಅವಧಿಯಲ್ಲಿ ಆ ಕೆಲಸ ಮಾಡಲಾಗುವುದು. ಆಮೂಲಕ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೈಟ್​ಟಾಪಿಂಗ್ ಬಿಳಿಯಾನೆಯಲ್ಲ

ಡಾಂಬರು ರಸ್ತೆ ಮತ್ತು ವೈಟ್​ಟಾಪಿಂಗ್ ರಸ್ತೆಗಳಿಗೆ ಮಾಡಲಾಗುವ ವೆಚ್ಚದ ಬಗ್ಗೆ ಅಷ್ಟೇನೂ ವ್ಯತ್ಯಾಸವಿಲ್ಲ. ಡಾಂಬರು ರಸ್ತೆಗಿಂತ ಶೇ.40 ಹೆಚ್ಚುವರಿ ವೆಚ್ಚವಾಗಲಿದೆ. ಆದರೆ, ವೈಟ್​ಟಾಪಿಂಗ್ 30 ವರ್ಷ ಬಾಳಿಕೆ ಬಂದರೆ, ಡಾಂಬರು ರಸ್ತೆಯ ಬಾಳಿಕೆ ಕಡಿಮೆ. ಹೀಗಾಗಿ ವೈಟ್​ಟಾಪಿಂಗ್ ಬೆಂಗಳೂರಿಗೆ ಹೆಚ್ಚು ಸೂಕ್ತ. ಅಲ್ಲದೆ, ಸದ್ಯ 36 ಕಿ.ಮೀ. ಉದ್ದದ ವೈಟ್​ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಕೆಲವೆಡೆ ಸಂಚಾರ ಪೊಲೀಸರ ಅನುಮತಿ ಸಿಗದ ಕಾರಣಕ್ಕೆ ಕಾಮಗಾರಿ ಆರಂಭಗೊಂಡಿದ್ದರೂ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ಅದನ್ನೆಲ್ಲ ಸರಿಪಡಿಸಲಾಗಿದ್ದು, ಕಾಮಗಾರಿಗೆ ವೇಗ ನೀಡಲಾಗುತ್ತದೆ ಎಂದು ಹೇಳಿದರು.

ಕೆಂಪೇಗೌಡ ಪ್ರಶಸ್ತಿ ಗೌರವ ಉಳಿಸುತ್ತೇನೆ

ಕೆಲ ಗೊಂದಲಗಳಿಂದಾಗಿ ಕೆಂಪೇಗೌಡ ಪ್ರಶಸ್ತಿ ಬಗ್ಗೆ ಅಣಕವಾಡುವಂತಾಗಿದೆ. ಅದರ ಬಗ್ಗೆ ಸರ್ಕಾರ ಮಟ್ಟದಲ್ಲೂ ಚರ್ಚೆಯಾಗಿದೆ. ಹೀಗಾಗಿ ಈ ಬಾರಿ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ. ಎಷ್ಟೇ ಶಿಫಾರಸು ಬಂದರೂ ಅದರಲ್ಲಿ ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುವುದು. ಮೊದಲು ಘೋಷಿಸಿದಷ್ಟೇ ಪ್ರಶಸ್ತಿಗಳನ್ನು ನೀಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಹೆಸರುಗಳನ್ನು ಸೇರಿಸುವುದಿಲ್ಲ. ಬೆಂಗಳೂರು ನಿರ್ವತೃ ಕೆಂಪೇಗೌಡ ಹೆಸರಿನಲ್ಲಿ ನೀಡುವ ಪ್ರಶಸ್ತಿಯ ಘನತೆ ಉಳಿಸುವ ಕೆಲಸ ಮಾಡುತ್ತೇನೆ ಎಂದು ಗಂಗಾಂಬಿಕೆ ತಿಳಿಸಿದರು.

ಆದಾಯ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು

ಯೋಜನೆ ಜಾರಿಗೆ ಪ್ರತಿ ಬಾರಿ ಸರ್ಕಾರದತ್ತ ಮುಖ ಮಾಡುವ ಸ್ಥಿತಿಯಿದೆ. ಅದನ್ನು ಹೋಗಲಾಡಿಸಿ ಬಿಬಿಎಂಪಿ ಸ್ವಂತ ಆದಾಯದಲ್ಲಿ ಯೋಜನೆ ಜಾರಿಗೊಳಿಸುವಂತೆ ಮಾಡಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜತೆಗೆ ಬೃಹತ್ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ, ತೆರಿಗೆ ವ್ಯಾಪ್ತಿಗೊಳಪಡದ ಆಸ್ತಿಗಳನ್ನು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡುವುದು, ಬಿ ಖಾತಾಗಳಿಗೆ ಎ ಖಾತಾ ನೀಡುವಾಗ ಸುಧಾರಣಾ ವೆಚ್ಚ ಭರಿಸುವುದು ಹೀಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಎಲ್ಲ ಕ್ರಮಗಳ ಮೂಲಕ ಬಿಬಿಎಂಪಿ ಆರ್ಥಿಕ ಸದೃಢವನ್ನಾಗಿ ಮಾಡಲಾಗುವುದು ಎಂದು ಮೇಯರ್ ಹೇಳಿದರು.

ಬಜೆಟ್ ಅನುಷ್ಠಾನಕ್ಕೆ ಒತ್ತು

ಈ ಬಾರಿಯ ಬಜೆಟ್ ಮೊತ್ತ ಹೆಚ್ಚಾಯಿತು ಎಂಬ ಮಾತುಗಳಿವೆ. ಆದರೆ, ಬಜೆಟ್​ನಲ್ಲಿ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಈಗಿನಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯೋಜನೆಗಳಿಗೆ ಬೇಕಾಗುವ ಅನುದಾನವನ್ನು ಸರ್ಕಾರ ಮತ್ತು ಸ್ವಂತ ಆದಾಯದಿಂದ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ 1,300 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಉಳಿದ 10 ತಿಂಗಳಲ್ಲಿ 3 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದೆ.

ಜತೆಗೆ ಒಎಫ್​ಸಿ, ಮಾರುಕಟ್ಟೆ ಬಾಡಿಗೆ ಸೇರಿ ಇನ್ನಿತರ ಮೂಲಗಳಿಂದ ಆದಾಯ ಸಂಗ್ರಹಿಸಲಾಗುತ್ತದೆ. ಒಟ್ಟಾರೆ ಬಿಬಿಎಂಪಿಯನ್ನು ಆರ್ಥಿಕ ಸದೃಢ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾ ಗುವುದು. ಜತೆಗೆ ಬಜೆಟ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೇಯರ್ ತಿಳಿಸಿದರು.

ಶಾಲೆಗಳ ಅಭಿವೃದ್ಧಿ ಸಮಿತಿ ರಚನೆ

ಬಿಬಿಎಂಪಿ ಶಾಲೆಗಳಲ್ಲಿ ಸೆಟಲೈಟ್ ಶಿಕ್ಷಣ ನೀಡುವ ಸಂಬಂಧ ಈಗಾಗಲೆ ಮೈಕ್ರೋಸಾಫ್ಟ್ ಸಂಸ್ಥೆ ಯೋಜನೆ ರೂಪಿಸಿದೆ. ಅದರ ಜತೆಗೆ ಇನ್ನಿತರ ಖಾಸಗಿ ಸಂಸ್ಥೆಗಳ ಜತೆಗೂಡಿ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಖಾಸಗಿ ಸಂಸ್ಥೆಗಳ ನೆರವು ಪಡೆಯುವ ಸಂಬಂಧ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಆ ಮೂಲಕ ಬಿಬಿಎಂಪಿ ಶಾಲೆಗಳನ್ನು ಉಳಿಸುವುದರ ಜತೆಗೆ, ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲಾಗುವುದು ಎಂದು ಗಂಗಾಂಬಿಕೆ ಭರವಸೆ ನೀಡಿದರು.

Leave a Reply

Your email address will not be published. Required fields are marked *