ರೈತರ ಉದ್ಧಾರಕ್ಕೆ ನಿಮ್ಮ ಸಲಹೆ ಕೇಳಲು ನಾವು ಕಾತರರಾಗಿದ್ದೇವೆ: ಸುಮಲತಾ ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು: ಜೆಡಿಎಸ್‌ ನಾಯಕರ ವಿರುದ್ಧ ಫೇಸ್‌ಬುಕ್‌ನಲ್ಲಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸುಮಲತಾ ಅಂಬರೀಷ್‌ ಅವರ ವಿರುದ್ಧ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ, ಈಗ ದಿಢೀರನೆ ಪ್ರತ್ಯಕ್ಷರಾಗಿ ಪ್ರತಿ ದಿನ ಹೊಲ ಗದ್ದೆಗಳಲ್ಲಿ ದುಡಿದು, ಉತ್ತು ಭಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ ಕೇಳಲು ನಾವು ಕಾತರರಾಗಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ ಮೂಲಕ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.

ಇದರೊಂದಿಗೆ ಎಸ್​ ಎಂ ಕೃಷ್ಣ ಅವರ ಕುಟುಂಬ ರಾಜಕಾರಣ ಹೇಳಿಕೆಗೂ ತಿರುಗೇಟು ನೀಡಿರುವ ಅವರು, ಮಾನ್ಯ ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತುಹೋಗಿದೆ ಎಂದು ಭಾವಿಸುತ್ತೇನೆ. 50 ವರ್ಷ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ. ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಷ್ಟೆಲ್ಲ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದದ್ದು ನೆನಪಿದೆ ಎಂದು ಭಾವಿಸುತ್ತೇನೆ ಎಂದು ಕೃಷ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *