ಬಲಿಷ್ಠ ನಾಯಕರನ್ನು ಟಾರ್ಗೆಟ್‌ ಮಾಡುವುದೇ ಬಿಜೆಪಿ ಕೆಲಸ: ಡಿ ಕೆ ಸುರೇಶ್

ಬೆಂಗಳೂರು: ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡುವುದು ಬಿಜೆಪಿ ಕೆಲಸವಾಗಿದೆ. ಸ್ಟ್ರಾಂಗ್ ಇರುವ ನಾಯಕರನ್ನು ಒಳಗೆ ಹಾಕಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಕೆಲ ನಾಯಕರನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಕಟ್ಟಾಳುಗಳು ಜೈಲಿಗೆ ಹಾಕಲಿ. ಆದರೂ ನಾವು ಬಿಜೆಪಿಗೆ ಹೋಗಲ್ಲ. ನಾವು ಜಗ್ಗಲ್ಲ, ಬಗ್ಗಲ್ಲ. ಕೇಂದ್ರ ಸರ್ಕಾರದಿಂದ ಇಡಿ ಮತ್ತು ಐಟಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಬಲ ನಾಯಕರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿಯನ್ನು ಜೈಲಿಗೆ ಕಳುಹಿಸಲೇಬೇಕು ಎಂಬ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜಕಾರಣಿಗಳು ಶಾಶ್ವತ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಸಂವಿಧಾನಕ್ಕೆ ಗೌರವ ನೀಡಿ ಕೇಂದ್ರದ ಒತ್ತಡವನ್ನು ಪಕ್ಕಕ್ಕೆ ಇಟ್ಟು ಕಾನೂನಿನ ಅಡಿಯಲ್ಲೇ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಒಂದು ಪಕ್ಷದ ಅಡಿ ಕೆಲಸ ಮಾಡುವುದು ತರವಲ್ಲ ಎಂದರು.

ಇಡಿ ನಿರ್ದೇಶಕರನ್ನು ಭೇಟಿ ಮಾಡಲು ಒಂದೂವರೆ ತಿಂಗಳಿಂದ ಪ್ರಯತ್ನ ಮಾಡಿದರೂ ಅವಕಾಶ ಕೊಡುತ್ತಿಲ್ಲ. ಬಿಜೆಪಿ ನಾಯಕರು ಇಡಿ ಮತ್ತು ಸಿಬಿಐ ಹೆಸರು ಹೇಳಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡಿದ್ದೆವು. ಆದರೆ ಕಾಲಾವಕಾಶ ನೀಡಿಲ್ಲ ಎಂದು ಹೇಳಿದರು.

ರಾಮನಗರದ ಜನ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಗೆ ಮತ ನೀಡಿದ ಮತದಾರರಿಗೆ ಧನ್ಯವಾದಗಳು. ಡಿಕೆಶಿ ಜೈಲಿಗೆ, ಶಾಂತಾ ದೆಹಲಿಗೆ ಎಂಬ ಹೇಳಿಕೆಯನ್ನು ಶಾಸಕ ಶ್ರೀರಾಮುಲು ನೀಡಿಲ್ಲ ಬದಲಿಗೆ ಅದು ಬಿಜೆಪಿ ರಾಷ್ಟ್ರೀಯ ನಾಯಕರು ಹೇಳಿಸಿರುವ ಹೇಳಿಕೆ ಎಂದು ಆರೋಪಿಸಿದರು. (ದಿಗ್ವಿಜಯ ನ್ಯೂಸ್)