ಬಿಡಿಎದಿಂದ ಒಂದೇ ಕುಟುಂಬಕ್ಕೆ 245 ಬದಲಿ ನಿವೇಶನ!

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬದಲಿ ನಿವೇಶನ ಹೆಸರಲ್ಲಿ ಒಂದೇ ಕುಟುಂಬಕ್ಕೆ 245 ನಿವೇಶನ ಹಂಚುವ ಮೂಲಕ 600 ಕೋಟಿ ರೂ. ಹಗರಣಕ್ಕೆ ಸಿಲುಕಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಕಾಪೋರೇಟರ್ ಆಗಿದ್ದ ಹನುಮಂತೇಗೌಡ ಮತ್ತು ಸಂಬಂಧಿಕರಿಗೆ ಬಿಡಿಎ ಆಯುಕ್ತ ಶ್ಯಾಮ್ ಭಟ್ 600 ಕೋಟಿ ರೂ. ಮೌಲ್ಯದ 245 ಬದಲಿ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಬಿಡಿಎಯಿಂದ ಬದಲಿ ನಿವೇಶನ ಪಡೆದುಕೊಳ್ಳಬೇಕಾದಲ್ಲಿ ಎಚ್. ಶಶಿಧರ್ ವರದಿಯಲ್ಲಿರುವ ಕೆಲ ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಅದರಲ್ಲಿ ಪಹಣಿ, ಋಣಭಾರರಾಹಿತ್ಯ ಪತ್ರ, ದೃಢೀಕೃತ ಮ್ಯುಟೇಷನ್, ಜಮೀನಿನ ಹಿಸ್ಸಾ ನಕ್ಷೆ ಒದಗಿಸುವುದು ಅಗತ್ಯವಾಗಿರುತ್ತದೆ. ಆದರೆ, ಆ ರೀತಿಯ ದಾಖಲೆಗಳನ್ನು ಒದಗಿಸದಿದ್ದರೂ ಬದಲಿ ನಿವೇಶನಗಳನ್ನು ನೀಡಲಾಗಿದೆ. ಬಿಡಿಎದಲ್ಲಿ ಮಾಹಿತಿ ಪಡೆದುಕೊಳ್ಳುತ್ತಿದ್ದ ಹನುಮಂತೇಗೌಡ, ಭೂಮಾಲೀಕರ ದಿಕ್ಕು ತಪ್ಪಿಸಿ ಜಿಪಿಎ ಮೂಲಕ ಸ್ವತ್ತುಗಳನ್ನು ಪಡೆದುಕೊಳ್ಳುತ್ತಿದ್ದರು. ಆ ಭೂಮಿಯನ್ನು ತಮ್ಮ ಹಾಗೂ ಸಂಬಂಧಿಕರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡು, ಆ ಸ್ವತ್ತುಗಳನ್ನು ಬಿಡಿಎಗೆ ನೀಡಿ, ಅದಕ್ಕೆ ಪ್ರತಿಯಾಗಿ ಈಗಾಗಲೇ ಬಿಡಿಎ ಅಭಿವೃದ್ಧಿಪಡಿಸಿದ್ದ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಪಡೆದುಕೊಂಡು ವಂಚನೆ ಮಾಡಿದ್ದಾರೆ. ಹೀಗೆ ಬಿಡಿಎ ಮಾಜಿ ಆಯುಕ್ತ ಶ್ಯಾಮ್ ಭಟ್ ಮತ್ತು ಹನುಮಂತೇಗೌಡ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸಬೇಕು. ಈ ಕುರಿತು ಸಿಎಂಗೆ ದಾಖಲೆಸಹಿತ ದೂರು ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *