ಕೈ ರಾಜಕೀಯಕ್ಕೆ ಎಚ್​ಎಎಲ್ ಬೇಸರ

ಬೆಂಗಳೂರು: ರಫೆಲ್ ಡೀಲ್ ಕುರಿತಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನ ಹಾಲಿ ಹಾಗೂ ಮಾಜಿ ನೌಕರರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ನಡೆಸಿರುವುದು ರಾಜಕೀಯ ಹಾಗೂ ವಿಷಾದಕರ ಬೆಳವಣಿಗೆ ಎಂದು ಎಚ್​ಎಎಲ್ ಖೇದ ವ್ಯಕ್ತಪಡಿಸಿದ್ದು, ಇದು ರಾಷ್ಟ್ರೀಯ ಭದ್ರತೆ ಹಾಗೂ ಸಂಸ್ಥೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದೆ.

ಈ ಕುರಿತು ಎಚ್​ಎಎಲ್ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಸಂವಾದ ನಡೆಸಿರುವುದನ್ನು ಪ್ರಸ್ತಾವಿಸಿಲ್ಲವಾದರೂ ಆಧುನಿಕ ಭಾರತದ ಮಂದಿರಗಳಂತಿರುವ ಸಂಸ್ಥೆಗಳನ್ನು ಧ್ವಂಸಗೊಳಿಸುವ ಹುನ್ನಾರ ನಡೆದಿದೆ ಎಂದು ಸಂವಾದದಲ್ಲಿ ಟೀಕಿಸಿದ ಬೆನ್ನಲ್ಲೇ ತನ್ನ ಅಸಮಾಧಾನ ಹೊರಹಾಕಿದೆ.

ಎನ್​ಡಿಎದಿಂದ ಪ್ರೋತ್ಸಾಹ: ಈ ಕುರಿತು ಎಚ್​ಎಎಲ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿ, ಎನ್​ಡಿಎ ಸರ್ಕಾರ 2014ರಿಂದ 2018ರ ಅವಧಿಯಲ್ಲಿ ಎಚ್​ಎಎಲ್​ಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತ ಬಂದಿದ್ದು, 27,340 ಕೋಟಿ ರೂ. ಮೌಲ್ಯದ ಪೂರೈಕೆಯ ಬೇಡಿಕೆಗಳನ್ನು ನೀಡಿದೆ. ಅಲ್ಲದೇ ಎಚ್​ಎಎಲ್ ಮೂಲಸೌಕರ್ಯ ವೃದ್ಧಿ ಮತ್ತು ಆಧುನೀಕರಣಕ್ಕೆ 7,800 ಕೋಟಿ ರೂ.ಗಳನ್ನು ಒದಗಿಸುವ ಮುಖಾಂತರ ಸಂಸ್ಥೆಯ ಮಹತ್ವವನ್ನು ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.

ದೇಶದ ನಿರ್ಮಾಣದಲ್ಲಿ ಅದರಲ್ಲೂ ವೈಮಾನಿಕ ಹಾಗೂ ಭದ್ರತಾ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ ಹಾಗೂ ಅದರ ಘನತೆ ಅವಿಚ್ಛಿನ್ನವಾಗಿ ಮುಂದುವರಿದಿದೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.

‘ಸಂಸ್ಥೆಯ ಹಾಲಿ, ಮಾಜಿ ನೌಕರರನ್ನು ಸಂವಾದದಲ್ಲಿ ತೊಡಗಿಸಿಕೊಂಡು ರಾಜಕೀಯಗೊಳಿಸುವ ಬೆಳವಣಿಗೆ ನಡೆದಿರುವುದು ದುರದೃಷ್ಟಕರ ಹಾಗೂ ಇದರಿಂದ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್​ಎಎಲ್ ನೌಕರರ ಜತೆಗಿನ ಸಂವಾದದ ವೇಳೆ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಎನ್​ಡಿಎ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರದ ಭಾಗವಾದ ರಫೆಲ್ ಡೀಲ್ ಅನ್ನು ಎಚ್​ಎಎಲ್​ನಿಂದ ರದ್ದುಪಡಿಸುವ ಮೂಲಕ ರಾಷ್ಟ್ರೀಯ ಹಿತಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ದೂರಿದ್ದರಲ್ಲದೇ ರಫೆಲ್ ಡೀಲ್ ಎಚ್​ಎಎಲ್ ನೌಕರರ ಹಕ್ಕು ಎಂದು ಪ್ರತಿಪಾದಿಸಿದ್ದರು.