ಬಿಎಂಟಿಸಿ ಬಸ್‌ಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳು

ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಪಾದಚಾರಿಗಳಿಗೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಘಟನೆ ಬೆಳಗ್ಗೆ ನಡೆದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ್ತೂರಬಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಂದ್ರಕಾಂತ್ ಮತ್ತು ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ಅಪಘಾತದಲ್ಲಿ ಮೃತರಾಗಿದ್ದಾರೆ.

ಸದ್ಯ ವಿದ್ಯಾರ್ಥಿಗಳ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಪಾಲಿಕೆ ವತಿಯಿಂದ ಮೃತ ವಿದ್ಯಾರ್ಥಿಗಳ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಮತ್ತೊಬ್ಬ ಕಾಲೇಜು ವಿದ್ಯಾರ್ಥಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡಬಸ್ತಿಯಿಂದ ಕೆ.ಆರ್.ಮಾರ್ಕೆಟ್​ಗೆ ತೆರಳುತ್ತಿದ್ದ ಬಸ್‌ ಚಾಲಕ ಅಸ್ವಸ್ಥನಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದ ಕಾಂಪೌಂಡ್​ಗೆ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಚಾಲನೆ ವೇಳೆ ಹೃದಯಾಘಾತವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್)