ದೇಗುಲಗಳತ್ತ ಭಕ್ತರ ದಂಡು

ಗುಂಡ್ಲುಪೇಟೆ: ಹೊಸ ವರ್ಷದ ಮೊದಲನೆಯ ದಿನ ಮಂಗಳವಾರ ತಾಲೂಕಿನ ಭಕ್ತರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ, ವಿಜಯನಾರಾಯಣ, ಹನುಮ ಹಾಗೂ ಅಯ್ಯಪ್ಪ ದೇವಸ್ಥಾನ, ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟ, ಸ್ಕಂದಗಿರಿ ಪಾರ್ವತಿ ದೇವಸ್ಥಾನ, ತ್ರಿಯಂಭಕೇಶ್ವರ ದೇವಸ್ಥಾನ, ಬೆರಟಹಳ್ಳಿ ಅಕ್ಷಯ ಮಹದೇಶ್ವರ ದೇವಸ್ಥಾನ, ಕೆಬ್ಬೆಕಟ್ಟೆ ಶನೈಶ್ಚರ ದೇವಸ್ಥಾನ, ಮಲೆ ಮಹದೇಶ್ವರ ಹಾಗೂ ತಾಳವಾಡಿ ಪಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನ ದೇವಸ್ಥಾನಗಳಿಗೆ ಭಕ್ತರು ತೆರಳಿ ನೂತನ ವರ್ಷವು ಶುಭವನ್ನುಂಟು ಮಾಡಲಿ ಎಂದು ಪೂಜೆ ಸಲ್ಲಿಸಿದರು.
ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮವಲಯಕ್ಕೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಣದ ಸಾರಿಗೆ ಡಿಪೋದಿಂದ 20 ಬಸ್ಸುಗಳು ಸಂಚರಿಸುವಂತೆ ಮಾಡಲಾಗಿತ್ತು.
ಹೊಸ ವರ್ಷಾಚರಣೆಗೆ ಊಟಿಗೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ದೇವಸ್ಥಾನಕ್ಕೆ ತೆರಳಲು ಬೆಟ್ಟದ ತಪ್ಪಲಿನಲ್ಲಿ ಗಂಟೆಗಟ್ಟಲೆ ಬಸ್ಸಿಗಾಗಿ ಕಾಯಬೇಕಾಗಿತ್ತು. ಇಕ್ಕಟ್ಟಾದ ಏರು ರಸ್ತೆಯಲ್ಲಿ ಸಾಗಿದ ಭಕ್ತರಿಗೆ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ತೀವ್ರವಾಗಿ ಪರದಾಡಿದರು.
ಬೆರಟಹಳ್ಳಿ ಗ್ರಾಮಸ್ಥರು 22 ವರ್ಷಗಳಿಂದ ಹೊಸ ವರ್ಷದ ದಿನ ಅಕ್ಷಯ ಮಹದೇಶ್ವರ ದೇವಸ್ಥಾನದಲ್ಲಿ ಆರಾಧನೆ ನಡೆಸುತ್ತಿದ್ದಾರೆ. ಭಕ್ತರ ಮನದ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದ್ದು, ಪ್ರತಿವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳಗ್ಗೆಯಿಂದಲೇ ಆಗಮಿಸಿದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಭಕ್ತರು ಪ್ರಸಾದ ಸ್ವೀಕರಿಸಿದರು. ತಾಲೂಕಿನ ಇಂಗಲವಾಡಿ, ಮಲ್ಲಯ್ಯನಪುರ ಮುಂತಾದ ಗ್ರಾಮಗಳ ಮಹದೇಶ್ವರ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಹೊಸವರ್ಷಾಚರಣೆಗೆ 30 ಹಾಗೂ 31ರಂದು ಆನ್‌ಲೈನ್‌ನಲ್ಲಿ ಈ ಬಾರಿ ಅತಿಥಿಗೃಹಗಳನ್ನು ಬಾಡಿಗೆಗೆ ನೀಡದ ಪರಿಣಾಮ ಬಂಡೀಪುರಕ್ಕೆ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಮೋಜು ಮಸ್ತಿಗಾಗಿ ಬಂಡೀಪುರಕ್ಕೆ ಆಗಮಿಸಿ ಇಡೀ ರಾತ್ರಿ ಹೊಸವರ್ಷಾಚರಣೆ ನಡೆಸಲು ಅವಕಾಶ ನೀಡಲಿಲ್ಲ.
ಸಫಾರಿಗೆ ಮಾತ್ರ ಆನ್‌ಲೈನ್ ಬುಕಿಂಗ್ ಮಾಡಲಾಗಿದ್ದು, ಸುತ್ತಮುತ್ತಲ ರೆಸಾರ್ಟ್‌ಗಳಲ್ಲಿ ಉಳಿದಿದ್ದ ಪ್ರವಾಸಿಗರು ಮಾತ್ರ ಆಗಮಿಸಿದ್ದರು. ರೆಸಾರ್ಟುಗಳಲ್ಲಿ ಅಬ್ಬರದ ಸಂಗೀತ ಹಾಗೂ ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲಾಗಿದ್ದರಿಂದ ಕೆಲವೇ ಪ್ರವಾಸಿಗಳು ಮಾತ್ರ ಸಫಾರಿಗೆ ಆಗಮಿಸಿದ್ದರು. ಸಫಾರಿಗೆ ತೆರಳಲು ಟಿಕೆಟ್ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.