ಕಾವಡಿ ಮಾಲಾಧಾರಿಗಳಿಂದ ಮೆರವಣಿಗೆ

ಬಾಳೆಹೊನ್ನೂರು: ಪಟ್ಟಣ ಸಮೀಪದ ಬಂಡಿಮಠ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪಂಗುಣಿ ಉತ್ತಿರಂ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಕಾವಡಿ ಮಾಲಾಧಾರಿಗಳು ಗುರುವಾರ ಹಾಲುಬಿಂದಿಗೆ ಮೆರವಣಿಗೆ ನಡೆಸಿದರು.

ಉತ್ಸವದ ಹಿನ್ನೆಲೆಯಲ್ಲಿ ಕಾವಡಿ ಮಾಲೆ ಧರಿಸಿ ಏಳು ದಿನಗಳ ಕಾಲ ಕಠಿಣ ವ್ರತಾಚರಣೆ ಮಾಡಿದ ಭಕ್ತರು, ವ್ರತದ ಕೊನೇ ದಿನವಾದ ಗುರುವಾರ ಬೆಳಗ್ಗೆ ವಾದ್ಯಗೋಷ್ಠಿ, ಮೈಲ್ ಕಾವಡಿ, ಪೂ ಕಾವಡಿ ಹೊತ್ತು ಸಾಗಿದರು. ಪುರುಷರು ಮತ್ತು ಮಹಿಳೆಯರು ಸೇರಿ ನೂರಾರು ಭಕ್ತರು ಹಳದಿ ವಸ್ತ್ರವನ್ನುಟ್ಟು ಜೇಸಿ ವೃತ್ತದ ಬಳಿಯಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಹಾಲು ಬಿಂದಿಗೆಯೊಂದಿಗೆ ಹರೋಗರ ದೇವರ ನಾಮಸ್ಮರಣೆ ಮಾಡುತ್ತ ಮೆರವಣಿಗೆ ನಡೆಸಿದರು.

ಭದ್ರಾ ನದಿಗೆ ತೆರಳಿ ಗಂಗಾಪೂಜೆ ನೆರವೇರಿಸಿ ಬಾಲಸುಬ್ರಹ್ಮಣ್ಯಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ವಿವಿಧ ವಾದ್ಯಗೋಷ್ಠಿಯೊಂದಿಗೆ ತಮಿಳುನಾಡಿನ ಕಲಾವಿದರಿಂದ ಪರವೇ ಕಾವಡಿ, ಕರಗಾಟ, ನಾಸಿಕ್​ಡೋಲ್ ಹಾಗೂ ಸಿಡಿಮದ್ದು ಪ್ರದರ್ಶನದೊಂದಿಗೆ ವಿಶೇಷ ಅಲಂಕೃತ ವಾಹನದಲ್ಲಿ ಬಾಲಸುಬ್ರಹ್ಮಣ್ಯಸ್ವಾಮಿ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ದೇವಸ್ಥಾನದ ಅಧ್ಯಕ್ಷ ತಂಗವೇಲು, ಭಾಸ್ಕರ್ ವೆನಿಲ್ಲಾ, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಎಸ್.ಮಂಜು, ಗೋವಿಂದರಾಜು, ಮಣಿ, ಪಳನಿಯಮ್ಮ, ಭರತ್, ಮಣಿಕಂಠನ್, ಸತ್ಯನಾರಾಯಣ, ತಂಬಿ, ಕೃಷ್ಣನ್, ಡಾ. ಎಂ.ಬಿ.ರಮೇಶ್, ಕೃಷ್ಣ ಭಟ್, ಸುನಿಲ್ ಭಟ್ ಇತರರಿದ್ದರು.