ಮುಖ್ಯಮಂತ್ರಿ ಪ್ರಚೋದನಾತ್ಮಕ ಹೇಳಿಕೆಯೇ ಬಂದ್​ಗೆ ಕಾರಣ: ಜಗದೀಶ್ ಶೆಟ್ಟರ್​

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಬಂದ್ ಹಿಂದೆ ಬಿಜೆಪಿಯ ಕುಮಕ್ಕಿದೆ ಎಂಬುದರಲ್ಲಿ ಅರ್ಥವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ತಿಳಿಸಿದ್ದಾರೆ.

ಗುರುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಗೆ ಉತ್ತರ ಕರ್ನಾಟಕ ಅಭಿವೃದ್ದಿಯಾಗುವುದು ಮುಖ್ಯವೇ ಹೊರತು, ರಾಜ್ಯವನ್ನು ಒಡೆಯುವುದಲ್ಲ. ಸಿಎಂ ಪ್ರಚೋದನಾ ಹೇಳಿಕೆಯಿಂದಲೇ ಪ್ರತ್ಯೇಕತೆ ಕೂಗು ಎದ್ದಿದೆ. ಇದಕ್ಕೆಲ್ಲ ಸಿಎಂ ಕುಮಾರಸ್ವಾಮಿಯವರೇ ಕಾರಣ ಎಂದು ದೂರಿದರು.

ನಮ್ಮೆಲ್ಲರಿಗೂ ಅಖಂಡ ಕರ್ನಾಟಕದ ಕನಸಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಡುತ್ತೇವೆ. ಶಾಸಕರಾದ ಉಮೇಶ ಕತ್ತಿ ಹಾಗೂ ಶ್ರೀರಾಮುಲು ಅವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಬಿಜೆಪಿ ಕೈವಾಡವಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಆರೋಪವನ್ನು ಅಲ್ಲಗೆಳೆದಿದ್ದಾರೆ.

ಬಂದ್​ಗೆ ಕರೆ ಕೊಟ್ಟಿದ್ದ ಉ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಬಂದ್ ಹಿಂಪಡೆದಿರುವುದಾಗಿ ಘೋಷಿಸಿದ್ದರು. ಆದರೆ, ಉತ್ತರ ಕರ್ನಾಟಕದ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಅವರು ಬಂದ್ ಆಚರಿಸುವುದು ನಿಶ್ಚಿತ ಎಂದು ತಿಳಿಸಿದ್ದರು. ಆದರೆ, ಬಂದ್​ಗೆ ಎಲ್ಲೂ ಕೂಡ ಉತ್ತಮ ಬೆಂಬಲ ವ್ಯಕ್ತವಾಗಿಲ್ಲ. (ದಿಗ್ವಿಜಯ ನ್ಯೂಸ್​)