ಆಂಬುಲೆನ್ಸ್‌ಗೆ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ

ಕಾರವಾರ: ತುರ್ತು ಸಂದರ್ಭಗಳಲ್ಲಿ ಲಭ್ಯವಿಲ್ಲದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಂದು ಹಾಗೂ ಆರೋಗ್ಯ ಕವಚ 108 ಆಂಬುಲೆನ್ಸ್‌ಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಸೇರಿದ ಜಿಲ್ಲಾ ಆಸ್ಪತ್ರೆಯಲ್ಲಿ 3 ಆಂಬುಲೆನ್ಸ್‌ಗಳಿವೆ. ಒಂದು ಹಳೆಯದಾಗಿ ಓಡಾಡುವ ಸ್ಥೀತಿಯಲ್ಲಿಲ್ಲ. ಇನ್ನೊಂದು ರಿಪೇರಿಗಾಗಿ ಹುಬ್ಬಳ್ಳಿಗೆ ಹೋಗಿದೆ. ಗರ್ಭಿಣಿ, ಬಾಣಂತಿ, ನವಜಾತ ಶಿಶುಗಳನ್ನು ಸಾಗಿಸುವ ಸಲುವಾಗಿ ಇರುವ ನಗು, ಮಗು ಆಂಬುಲೆನ್ಸ್‌ನಲ್ಲೇ ಎಲ್ಲ ರೋಗಿಗಳನ್ನೂ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಆರೋಗ್ಯ ಕವಚ 108 ಆಂಬುಲೆನ್ಸ್ ನಲ್ಲಿ ಸಿಬ್ಬಂದಿ ಕೊರತೆ ಇದ್ದು, ತುರ್ತು ಸಂದರ್ಭಕ್ಕೆ ಸಿಗುತ್ತಿಲ್ಲ.

ಮಂಗಳವಾರ ಅಪಘಾತಕ್ಕೆ ಒಳಗಾದ ಗಾಯಾಳುವೊಬ್ಬರನ್ನು ತುರ್ತಾಗಿ ಮಂಗಳೂರಿಗೆ ಸಾಗಿಸಲು ಆಂಬುಲೆನ್ಸ್ ಇಲ್ಲದೇ ತೊಂದರೆ ಅನುಭವಿಸಬೇಕಾಯಿತು. ಮತ್ತೆ, ಮತ್ತೆ ಇದೇ ಪರಿಸ್ಥಿತಿ ಉಂಟಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಎರವಾಗುತ್ತಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ದೂರಿದರು.

ರಾಮಾ ನಾಯ್ಕ, ಬಾಬು ಶೇಖ್ ಇತರರು ಪ್ರತಿಭಟನೆಯಲ್ಲಿ ಇದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ‘ಜಿಲ್ಲಾ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೊರತೆ ಇರುವುದು ನಿಜ. ನಮಗೆ ಆಂಬುಲೆನ್ಸ್ ಗಾಗಿ ಯಾವುದೇ ಅನುದಾನವಿಲ್ಲ. ಹೊಸ ಆಂಬುಲೆನ್ಸ್‌ಗೆ ಪ್ರಸ್ತಾವನೆಯನ್ನು ಮೆಡಿಕಲ್ ಕಾಲೇಜ್ ಗೆ ಕಳಿಸಿದ್ದೇವೆ. ಸದ್ಯ ಈಗಿರುವ ನಗು ಮಗು ಆಂಬುಲೆನ್ಸ್ ನಲ್ಲೇ ಎಲ್ಲ ಸೇವೆ ನಿಭಾಯಿಸಲಾಗುತ್ತಿದೆ’ಎಂದರು.

Leave a Reply

Your email address will not be published. Required fields are marked *