ಕೆರೂರ: ಆರಾಧ್ಯ ದೇವತೆ ಬನಶಂಕರಿದೇವಿ ರಥೋತ್ಸವವು ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ಬನಶಂಕರಿದೇವಿ ಅಮ್ಮನವರಿಗೆ ಕುಂಭಾಭಿಷೇಕ, ಮಹಾಭಿಷೇಕ ವಿಶೇಷ ಪೂಜಾ ಕೈಂಕಾರ್ಯಗಳು ನಡೆದವು.
ರಥೋತ್ಸವದ ನಿಮಿತ್ಯವಾಗಿ ವಿವಿಧ ಬಗೆಯ ಹೂಗಳಿಂದ ದೇವಿಯನ್ನು ಅಲಂಕರಿಸಲಾಗಿತ್ತು. ಜಾತ್ರೆಯ ಅಂಗವಾಗಿ ರಥಕ್ಕೆ ಹೂವಿನ ಮಾಲೆ,ಬಾಳೆಕಂಬ, ತಳಿರು ತೋರಣ, ಬಣ್ಣಬಣ್ಣದ ಧ್ವಜಗಳಿಂದ ಶೃಂಗರಿಸಲಾಗಿತ್ತು.
ಸಂಜೆ ಗೋಧೂಳಿ ಮೂಹುರ್ತದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ‘ಶಂಭುಕೋ ಶಂಭುಕೋ’ ಎನ್ನುತ್ತಾ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಆವರಣದಲ್ಲಿ ನೇರದಿದ್ದ ಸಾವಿರಾರು ಭಕ್ತರು ರಥಕ್ಕೆ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು. ವಿವಿಧ ಕಡೆಯಿಂದ ಬಂದಂತಹ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.