ನಾಳೆಯಿಂದ ಬನಶಂಕರಿ ದೇವಿ ಜಾತ್ರೆ

ಬಾದಾಮಿ:ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದ ಬನಶಂಕರಿದೇವಿ ಜಾತ್ರಾ ಮಹೋತ್ಸವ ಜ.14ರಿಂದ ವಿವಿಧ ಧಾರ್ವಿುಕ ಕಾರ್ಯಗಳೊಂದಿಗೆ ಆರಂಭವಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಚೇರ್ಮನ್ ಮಲ್ಲಾರಭಟ್ ಎಸ್. ಪೂಜಾರ ಹೇಳಿದರು.

ಜ.20ರಂದು ಪಲ್ಲೇದ ಹಬ್ಬ, ಜ.21ರಂದು ಸಂಜೆ 5 ಗಂಟೆಗೆ ದೇವಿ ಮಹಾರಥೋತ್ಸವ ಹಾಗೂ ಜ.25ರಂದು ಕಲಶ ಇಳಿಸಲಾಗುವುದು. ಲಕ್ಷಾಂತರ ಭಕ್ತ ಸಮೂಹಕ್ಕೆ ಊಟ ಉಪಾಹಾರ, ಕುಡಿಯುವ ನೀರು, ಸ್ವಚ್ಛತೆ ನಿರ್ವಹಣೆ, ವಸತಿ ವ್ಯವಸ್ಥೆ ಸೇರಿ ಸಕಲ ಸೌಲಭ್ಯ ಒದಗಿಸಲು ಟ್ರಸ್ಟ್ ಕ್ರಮ ಕೈಗೊಂಡಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್ ಸದಸ್ಯ ಮಹೇಶ ಪೂಜಾರ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯ ಸುತ್ತಲಿನ ಪೌಳಿಯ ಮೇಲೆ ನೆರಳು ಸಮೇತ ಸರದಿ ಸಾಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಶೇ.50 ರಷ್ಟು ಜನದಟ್ಟಣೆ ನಿಭಾಯಿಸಬಹುದು. ವಸತಿ ಸೌಲಭ್ಯಕ್ಕಾಗಿ ಯಾತ್ರಿ ನಿವಾಸ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. 90 ಕೊಠಡಿಯುಳ್ಳ ಶಾಂಭವಿ ಕುಟೀರ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ವರ್ಷಪೂರ್ತಿ ಭಕ್ತರಿಗೆ ಲಭ್ಯವಾಗಲಿದೆ ಎಂದರು.

ದೇವಸ್ಥಾನದ ಸುತ್ತಲೂ ಮತ್ತು ರಥೋತ್ಸವ ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶಿವಯೋಗ ಮಂದಿರ, ರೋಣ, ಬಾದಾಮಿ, ಶಿವಪುರ ರಸ್ತೆ ಬದಿ ಖಾಸಗಿ ಜಮೀನಿನಲ್ಲಿ ಟ್ರಸ್ಟ್​ನಿಂದ ಕುಡಿವ ನೀರಿನ ಟ್ಯಾಂಕ್ ನಿರ್ವಿುಸಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಸಮಯದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಒಂದು ತಿಂಗಳು ಮರಳು ಟಿಪ್ಪರ್ ಓಡಿಸದಂತೆ ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳಬೇಕು. ರಥೋತ್ಸವ ದಿನದಿಂದ 5 ದಿನಗಳವರೆಗೆ ಜಾತ್ರೆಯಲ್ಲಿ ಟಂಟಂ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಮದ್ಯ, ಮಾಂಸಾಹಾರ ಮಾರಾಟ ಹಾಗೂ ಎಗ್​ರೈಸ್ ವ್ಯಾಪಾರವನ್ನೂ ತಡೆಯುವಂತೆ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಅನ್ನಭಟ್ಟ ಪೂಜಾರ, ಅನಂತ ಪೂಜಾರ, ವಿದ್ಯಾನಂದ ಪೂಜಾರ, ಎಚ್.ಡಿ. ಪೂಜಾರ, ಪ್ರಕಾಶ ಪೂಜಾರ, ಮಾರ್ತಂಡಭಟ್ಟ ಪೂಜಾರ, ಶ್ರೀಕಾಂತ ಪೂಜಾರ, ಶ್ಯಾಮ ಪೂಜಾರ, ಅಚ್ಯುತ ಪೂಜಾರ, ಕಿರಣ ಪೂಜಾರ, ನಾಗೇಶ ಪೂಜಾರ, ವಿಕ್ರಮ ಪೂಜಾರ, ಅಭಿಷೇಕ ಪೂಜಾರ ಇತರರಿದ್ದರು.

ಧಾರ್ವಿುಕ ಕಾರ್ಯಕ್ರಮ:14ರಂದು ನವರಾತ್ರಿ ಆರಂಭ, ಘಟಸ್ಥಾಪನೆ, ಗರುಡಪಟ್ಟ ಕಟ್ಟುವುದು ಶಿಬಿಕವಾಹನ, 15ರಂದು ಮಹಾಗಣಪತಿ ಹವನ, 16ರಂದು ರೇಣುಕಾಂಬ ಹವನ ಗರುಡವಾಹನ, 17ರಂದು ವಾರಾಹಿ ಹೋಮ ಶೇಷವಾಹನ, 18ರಂದು ಶಾಕಾಂಬರ ಮಾಲಾ ಮಂತ್ರ ಹೋಮ ಸಿಂಹ ವಾಹನ, 19ರಂದು ರಾಜಶ್ಯಾಮಲಾಂಬಾ ಹವನ ನಂದಿವಾಹನ, 20ರಂದು ಖಡ್ಗಮಾಲಾಮಂತ್ರ ಹವನ ಗಜ ವಾಹನ, 21ರಂದು ಬನದ ಹುಣ್ಣಿಮೆ, ನವಚಂಡಿಹವನ ಹಾಗೂ ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿವೆ. 22ರಂದು ಅಶ್ವವಾಹನ, 25ರಂದು ಸಂಜೆ ಕಲಶಾವರೋಹಣ ನಡೆಯಲಿದೆ.

ಧರ್ಮದರ್ಶನಕ್ಕೆ ಅವಕಾಶ:14ರಂದು ಜಾತ್ರೆ ಆರಂಭದ ನಿಮಿತ್ತ ಘಟಸ್ಥಾಪನೆ ಇರುವುದರಿಂದ ಬೆಳಗ್ಗೆ 6.30 ರಿಂದ 9.30ರವರೆಗೆ ಮಾತ್ರ ಧರ್ಮದರ್ಶನಕ್ಕೆ ಅವಕಾಶ ಇರುತ್ತದೆ. ನಂತರ ಬೆಳಗ್ಗೆ 9.30 ರಿಂದ ಸಂಜೆ 4.30ರವೆರೆಗೆ ಧರ್ಮದರ್ಶನಕ್ಕೆ ಅವಕಾಶ ರುವುವುದಿಲ್ಲ. ಅಂದು ಸಂಜೆ 4.30 ನಂತರ ಧರ್ಮದರ್ಶನ ಮತ್ತು ವಿಶೇಷ ಸೇವೆಗಳು ಆರಂಭಗೊಳ್ಳುತ್ತವೆ.